Karwar| ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾರವಾರ – ಅಂಕೋಲಾ ಕ್ಷೇತ್ರದಿಂದ ‘ಖಂಡಿತವಾಗಿ’ ಸ್ಪರ್ಧಿಸುವುದಾಗಿ ಜೆಡಿಎಸ್ ಧುರೀಣ, ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದ್ದಾರೆ.

ಕಾರವಾರದಲ್ಲಿ ಅವರ ಮನೆಯಂಗಳದಲ್ಲಿ ನಡೆದ ಜಾತ್ಯಾತೀತ ಜನತಾದಳದ ಕಾರ್ಯಕಾರಿಣಿ ಸಭೆಯಲ್ಲಿ ಕಾರ್ಯಕರ್ತರೆದುರು‌ ಬಹುತೇಕ ಕೊಂಕಣಿಯಲ್ಲಿ ಮಾತನಾಡಿದ‌ ಅಸ್ನೋಟಿಕರ್, ಎಲ್ಲಿಯೇ ಹೋದರೂ ಪ್ರತಿದಿನವೂ ತನಗೆ ಆಭಿಮಾನಿಗಳು, ಕಾರ್ಯಕರ್ತರು ‘ಹೇ ಪಾಟಿ ಇಲೆಕ್ಷನಾತ್ ರಾವ್ತಲೋ, ರಾವ್ತಲ್ಲೋ’ (ಚುನಾವಣೆಗೆ ನಿಲ್ಲುತ್ತಿರಾ) ಎಂದು ಪದೇ ಪದೇ ಕೇಳುತ್ತಿರುತ್ತಾರೆ ಎಂದರು.

ತನ್ನಷ್ಟು ಚುನಾವಣೆಗೆ ಸ್ಪರ್ಧೆ ಮಾಡಿದ ವ್ಯಕ್ತಿ ಮತ್ತೆ ಯಾರಿದ್ದಾರೆ? ಎಂದು ಪ್ರಶ್ನಿಸಿದ ಅಸ್ನೋಟಿಕರ್ ತಾನು ಕಳೆದ‌ ಬಾರಿ ವಿಧಾನ ಸಭಾ ಚುನಾವಣೆ ಹೊರತು ಪಡಿಸಿ ನಾಲ್ಕು ವಿಧಾನಸಭಾ ಹಾಗೂ ಒಂದು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಏನೇ ಆಗಲಿ ಈ ಬಾರಿ ಖಂಡಿತವಾಗಿ, ‘ಹಂಡ್ರೆಡ್ ಪರ್ಸಂಟ್’ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ.‌ ಮತ್ತೆ ಮತ್ತೆ ಇದನ್ನೇ ಕೇಳ ಬೇಡಿ, ‘ಹೇ ಪಾಟಿ ರಾವ್ತಲೋ ರಾವ್ತಲೊ ರಾವ್ತಲೊ, ಪರಪರತ್ ಆನಿ ವಿಚಾರ ನಾಕಾ’ ಎಂದು‌ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಿಗೆ ಸಾರಿ ಹೇಳಿದರು.

ಕಳೆದ‌ ವಿಧಾನಸಭಾ ಚುನಾವಣೆಯ ಆರಂಭದಿಂದ ಅಸ್ನೋಟಿಕರ್ ಚುನಾವಣೆಯಲ್ಲಿ ‘ತೋಳ ಬಂತು ತೋಳ’ ದ ಕಥೆಯಂತೆ ಆನಂದ ಅಸ್ನೋಟಿಕರ್ ಒಮ್ಮೆ ಬಿಜೆಪಿಯಿಂದ‌ ಸ್ಪರ್ಧೆ ಮಾಡುತ್ತೇನೆ, ಇನ್ನು ಕೆಲ ದಿನ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿ ಅಲ್ಲಿಂದಲೇ ಸ್ಪರ್ಧಿಸುತ್ತೇನೆ. ಇನ್ನೂ ಕೆಲ ದಿನ ನಂತರ ಪಕ್ಷೇತರನಾಗಿ ಕಣಕ್ಕೀಳಿಯುತ್ತೇನೆ ಎಂದು ಹೇಳಿ, ಕೊನೆಗೆ ಯಾವುದೂ ಇಲ್ಲದೇ, ಕ್ಷೇತ್ರದಿಂದಲೇ ಕಾಲ್ಕಿತ್ತಿದ್ದರು.

ಆದರೆ ಈ ಬಾರಿ ರಾಜ್ಯಮಟ್ಟದಲ್ಲಿ ಬಿಜೆಪಿ‌ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆಯಾಗಿದೆ. ಅಲ್ಲದೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ರೂಪಾಲಿ ನಾಯ್ಕ‌ ಸಣ್ಣ ಅಂತರದಿಂದ ಕಾಂಗ್ರೆಸ್ ನ ಸತೀಶ ಸೈಲ್ ಎದುರು ಪರಾಭವ ಹೊಂದಿದ್ದರು.

ಆನಂದ ಅಸ್ನೋಟಿಕರ್ ಮತ್ತು ಮಾಜಿ ಶಾಸಕಿ‌ ರೂಪಾಲಿ ನಾಯ್ಕ ನಡುವಿನ ಸಂಬಂಧ ಅಷ್ಟಕಷ್ಟೇ. ಎರಡೂ ಪಕ್ಷಗಳ ನಡುವೆ ರಾಜ್ಯಮಟ್ಟದಲ್ಲಿ ಹೊಂದಾಣಿಕೆಯಾಗಿದ್ರೂ, ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆಯ ಕೊರತೆ ಇದೆ. ಅಂಥದ್ದರಲ್ಲಿ, ಆನಂದ ಅಸ್ನೋಟಿಕರ್ ಈ ಬಾರಿ ಸ್ಪರ್ಧಿಸುವ ಇಂಗಿತ‌ ವ್ಯಕ್ತಪಡಿಸಿದ್ದಾರೆ. ಒಂದೊಮ್ಮೆ ಅವರು ಸ್ಪರ್ಧಿಸುವುದಾದರೆ ಈ ಕಾರವಾರ – ಅಂಕೋಲಾ ಕ್ಷೇತ್ರವನ್ನು ಬಿಜೆಪಿ ಬಿಟ್ಟು ಕೊಡಲಿದೆಯಾ? ಎಂಬುದೇ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.