ಭಟ್ಕಳ: ಹಿಂದೂಗಳು ಜಾತಿಯ ಕಟ್ಟಳೆಗಳಿಂದ ಹೊರಬಂದಾಗ ಮಾತ್ರ ಸುರಕ್ಷಿತವಾಗಿ ಉಳಿಯಲು ಸಾಧ್ಯ ಎಂದು ಮಾಜಿ ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಸುಮಾರು ಎರಡು ವರ್ಷಗಳ ಮೌನಃದ ಬಳಿಕ ಭಟ್ಕಳದ ಹಳೆ ಬಸ್ ನಿಲ್ದಾಣದ ಸಮೀಪ ನಡೆದ ಬೃಹತ್ ಹಿಂದೂ ಸಂಗಮ’ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿದ ಅವರು, ಹಿಂದೂ ಸಮಾಜದಲ್ಲಿ ಐಕ್ಯತೆ ಅಗತ್ಯವಿದೆ. ಹಿಂದೂಗಳು ಜಾತಿ-ಜಾತಿಗಳ ನಡುವೆ ಒಡೆಯದೆ ಒಂದಾಗಿ ನಿಲ್ಲಬೇಕು ಎಂದು ಹೇಳಿದರು.
ಹಿಂದೂಗಳು ಜಾತಿಯ ಕಟ್ಟಳೆಗಳಿಂದ ಹೊರಬಂದಾಗ ಮಾತ್ರ ಸುರಕ್ಷಿತವಾಗಿ ಉಳಿಯಲು ಸಾಧ್ಯ. ಜಾತಿಯ ಹುಳಗಿಂತ ದೊಡ್ಡ ಅಪಾಯ ಮತ್ತೊಂದಿಲ್ಲ ಎಂದ ಅನಂತಕುಮಾರ್, ಇತಿಹಾಸದ ಉದಾಹರಣೆಗಳನ್ನು ಉಲ್ಲೇಖಿಸಿ ಹಿಂದೂ ಸಮಾಜದಲ್ಲಿ ಜಾತಿಗಿಂತ ವ್ಯಕ್ತಿಯ ಯೋಗ್ಯತೆ ಮುಖ್ಯವಾಗಿತ್ತು. ವೇದಗಳನ್ನು ವಿಂಗಡಿಸಿದ ವ್ಯಾಸರು ಮೀನುಗಾರರ ಮಗ, ವಶಿಷ್ಠರು ಬ್ರಾಹ್ಮಣರಲ್ಲ, ಗೌತಮ ಮಹರ್ಷಿ ಕುಂಬಾರರ ಕುಟುಂಬದಿಂದ ಬಂದವರು ಎಂದು ಉದಾಹರಣೆ ನೀಡಿದರು. ಅವರನ್ನು ಜಾತಿಯಿಂದ ಅಲ್ಲ, ಅವರ ಯೋಗ್ಯತೆಯಿಂದ ಗುರುತಿಸಲಾಗಿದೆ ಎಂದು ಹೇಳಿದರು.
ಹಿಂದೂ ಸಮಾಜದಲ್ಲಿ ಒಳಗಿನ ದ್ರೋಹಗಳೇ ದೊಡ್ಡ ಹಾನಿ ಮಾಡಿವೆ ಎಂದು ಎಚ್ಚರಿಸಿದ ಅವರು, ಇತಿಹಾಸದಲ್ಲಿ ಜಯಚಂದ್ರನಂತಹ ಘಟನೆಗಳು ಹಿಂದೂ ಸಮಾಜವನ್ನು ದುರ್ಬಲಗೊಳಿಸಿದವು ಎಂದು ಎಚ್ಚರಿಸಿದರು. ನಾವು ಜಯಚಂದ್ರನ ಪರಂಪರೆಯಾಗಬಾರದು, ಶಿವಾಜಿ ಹಾಗೂ ವಿಜಯನಗರ ಸಾಮ್ರಾಜ್ಯದ ಪರಂಪರೆಯಾಗಬೇಕು ಎಂದು ಕರೆ ನೀಡಿದರು.
ಧರ್ಮ ಹಾಗೂ ಸಹಿಷ್ಣುತೆಯ ಕುರಿತು ಮಾತನಾಡಿದ ಅವರು, ಭಾರತವು ವಿವಿಧ ಧರ್ಮಗಳಿಗೆ ಆಶ್ರಯ ನೀಡಿದ ದೇಶವಾಗಿದೆ. ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯಗಳಿಗೆ ಈ ದೇಶದಲ್ಲೇ ಮೊದಲಿಗೆ ಮಸೀದಿ ಹಾಗೂ ಚರ್ಚ್ ಕಟ್ಟಲು ಅವಕಾಶ ನೀಡಿದ್ದು ನಮ್ಮ ಸಂಸ್ಕೃತಿಯ ಜಾತ್ಯಾತೀತತೆಯನ್ನು ತೋರಿಸುತ್ತದೆ, ಎಂದು ಹೇಳಿದರು.
ಹಿಂದೂತ್ವದ ಅರ್ಥವನ್ನು ವಿವರಿಸಿದ ಅವರು, ನಾವು ಬದುಕಬೇಕು, ಬೇರೆಯವರೂ ಬದುಕಬೇಕು ಎಂಬುದೇ ಹಿಂದೂತ್ವ, ಎಂದು ಹೇಳಿದರು.
ಆರ್ಎಸ್ಎಸ್ ಸಂಘಟನೆಯ ಪಾತ್ರವನ್ನು ಉಲ್ಲೇಖಿಸಿದ ಅವರು, ಸಂಘ ದೇಶದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಲವು ಸೋಗಲಾಡಿಗಳು ಸಂಘದ ವಿರುದ್ಧ ನೀಡುವ ಹೇಳಿಕೆಗಳಿಗೆ ತೀವ್ರವಾಗಿ ಟೀಕಿಸಿದರು.
ಯಾವುದೇ ಅಪೇಕ್ಷೆ ಇಲ್ಲದೆ ಮನೆ ಮನೆಗೆ ತೆರಳಿ ಸಮಾಜ ಜಾಗೃತಿ ಮೂಡಿಸಿದ ಹಿಂದು ಸಂಘಟನೆಯ ಕಾರ್ಯಕರ್ತರು ನಿಜವಾಗಿ ಈ ದೇಶ ಕಟ್ಟಿದವರು ಎಂದು ಅಭಿಪ್ರಾಯಪಟ್ಟರು.
ಇಂದು ಭಾರತೀಯ ಸಂಸ್ಕೃತಿಗೆ ಜಗತ್ತಿನಾದ್ಯಂತ ಗೌರವ ಹೆಚ್ಚುತ್ತಿದೆ ಎಂದು ಹೇಳಿದ ಅವರು, ಆಫ್ರಿಕಾದಂತಹ ದೇಶಗಳಲ್ಲಿಯೂ ಗಣೇಶ ಚತುರ್ಥಿ ಹಬ್ಬವನ್ನು ಉತ್ಸಾಹದಿಂದ ಆಚರಿಸಲಾಗುತ್ತಿದೆ ಎಂದು ಉದಾಹರಣೆ ನೀಡಿದರು.
ಭಟ್ಕಳದಲ್ಲಿ ಈ ಹಿಂದೆ ನಡೆದ ಕೋಮು ಗಲಭೆಗಳ ಬಗ್ಗೆ ಸೂಚ್ಯವಾಗಿ ಹೇಳಿದ ಅವರು, ಜನರು ಸಮಾಜದ ಏಕತೆಯ ಮಹತ್ವವನ್ನು ಈ ಹಿಂದಿನ ಪಾಠದಿಂದ ಅರಿತುಕೊಳ್ಳಬೇಕು. ಧರ್ಮದ ಕೆಲಸದಲ್ಲಿ ತಾನೂ ಸದಾ ತೊಡಗಿಸಿಕೊಂಡೇ ಇರುತ್ತೇನೆ ಎಂದು ಹೇಳಿದರು.
ಒಟ್ಟಾರೆ ಸಾರ್ವಜನಿಕ ಹಾಗೂ ರಾಜಕೀಯ ವಲಯಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಕಾರ್ಯಕ್ರಮದಲ್ಲಿ ಅನಂತಕುಮಾರ್ ತನ್ನ ಭಾಷಣವನ್ನು ಹಿಂದುತ್ವ ಹಾಗೂ ಆರ್.ಎಸ್.ಎಸ್ ಸಮರ್ಥನೆಯ ಬಗ್ಗೆ ಮಾತ್ರ ಇತ್ತು. ಆದರೆ ಬಿಜೆಪಿಯ ಬಗ್ಗೆ ಒಂದಕ್ಷರ ಸಹ ಮಾತನಾಡದೇ ಪಕ್ಷದ ಬಗ್ಗೆ ಇನ್ನೂ ಅಸಮಾಧಾನ ಇದೆ ಎಂಬ ಸಂದೇಶ ನೀಡಿದ್ದಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದ ಮಾತು.
