ರಾಜ್ಯದ ಕರಾವಳಿಯ ಜನರನ್ನು ಕಳೆದ ಮೂರು ದಶಕಗಳಿಂದ ಕಾಡುತ್ತಿದ್ದ ಎಂಡೋ ಸಲ್ಫಾನ್ ಎಂಬ ಮಹಾಮಾರಿ ಬೆಂಬಿಡದ ಭೂತದಂತೆ ಮತ್ತೆ ಮತ್ತೆ ಕಾಡತೊಡಗಿದೆ.
ಈ ಮಹಾಮಾರಿಯ ಕಾಟದಿಂದಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ಬಾಧಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಕಳೆದ ಆರು ತಿಂಗಳಲ್ಲಿ ಆರೋಗ್ಯ ಇಲಾಖೆಯಿಂದ ನಡೆದ ಸರ್ವೆಯಲ್ಲಿ ಎಂಡೋಸಲ್ಫಾನ್ ಬಾಧಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿರೋದು ಬೆಳಕಿಗೆ ಬಂದಿದೆ. ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗವನ್ನು ಕಳೆದ ಮೂರು ದಶಕಗಳಿಂದ ಭಯಂಕರ ಎಂಡೋಸಲ್ಫಾನ್ ಕಾಯಿಲೆ ಕಾಡುತ್ತಿದೆ.
ಎಂಡೋ ಇಫೆಕ್ಟ್ ಮುಗಿಯಿತು ಅನ್ನೋವಾಗಲೇ ಮತ್ತೆ ಎಂಡೋ ಬಾಧಿತರ ಸಂಖ್ಯೆಯಲ್ಲಿ ಏರಿಕೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ. ಹೊಸದಾಗಿ ಮಾಡಿದ ಸರ್ವೆಯಲ್ಲಿ 543 ಪ್ರಕರಣ ಪತ್ತೆಯಾಗಿರುವ ಬಗ್ಗೆ ಈಗಾಗಲೇ ಉತ್ತರಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಜಿಲ್ಲೆಯ ಭಟ್ಕಳ, ಶಿರಸಿ-ಸಿದ್ಧಾಪುರ, ಶಿರಾಲಿ, ಕುಮಟಾ, ಹೊನ್ನಾವರ, ಅಂಕೋಲಾದಲ್ಲಿ ಸರ್ವೇ ನಡೆದಿದ್ದು, ಈ ಆರು ತಿಂಗಳಲ್ಲಿ 543 ಹೊಸ ಪ್ರಕರಣ ಪತ್ತೆಯಾಗಿರುವ ಬಗ್ಗೆ ತಜ್ಞ ವೈದ್ಯರಿಂದಲೂ ಸಹ ಪರೀಕ್ಷೆಗಳು ನಡೆದಿವೆ. 543 ಪ್ರಕರಣಗಳ ಪೈಕಿ 228 ಮಂದಿ 15 ವರ್ಷದ ಒಳಗಿನ ಮಕ್ಕಳೇ ಇರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಪೀಳಿಗೆಯಿಂದ ಪೀಳಿಗೆಗೆ ಎಂಡೋಸಲ್ಫಾನ್ ಕಾಟ ಬಂದಿರುವ ಸಾಧ್ಯತೆಯಿದ್ದು, ಈ ಬಗ್ಗೆ ಸಂಶೊಧನೆ ನಡೆಸಬೇಕಾದ ಅಗತ್ಯವಿದೆ. ಅಂದಹಾಗೆ, 1985ರಿಂದ 1999ರವರೆಗೆ ಕರಾವಳಿ ಜಿಲ್ಲೆಗಳ ವಿವಿಧೆಡೆ ವಿಷಕಾರಿ ಎಂಡೋಸಲ್ಫಾನ್ ಸಿಂಪಡಣೆ ಮಾಡಿದ್ದರಿಂದ ಜನರ ಜೀವನವೇ ಹಾಳಾಗಿತ್ತು. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ವ್ಯಾಪ್ತಿಯ ಗೇರು ತೋಟಗಳಿಗೆ ಹೆಲಿಕಾಪ್ಟರ್ ಮೂಲಕ ಈ ಎಂಡೋ ಸಲ್ಫಾನ್ ಸಿಂಪಡಿಸಲಾಗಿತ್ತು.
ಆದರೆ, ಈ ಕ್ರಿಮಿನಾಶಕ ಸೇವನೆ ಮಾಡಿದವರು ಹಾಗೂ ಅವರ ಸಾವಿರಾರು ಮಕ್ಕಳು ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಇದೀಗ ಮತ್ತೆ ಬಾಧಿತರ ಸಂಖ್ಯೆ ಹೆಚ್ಚಳದಿಂದಜಿಲ್ಲೆಯ ಜನರಲ್ಲಿ ಎಂಡೋ ಸಲ್ಫಾನ್ ಕಾಟ ಭಯ ಹುಟ್ಟಿಸಿದೆ.ಸದ್ಯ ಸರಕಾರ ಬಾಧಿತರಿಗೆ ಸೂಕ್ತ ಚಿಕಿತ್ಸೆಯೊಂದಿಗೆ ಕರಾವಳಿಯ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.
