ಕರಾವಳಿಯಾದ್ಯಂತ ನಾಳೆ (ಶುಕ್ರವಾರ) ಸಂಭ್ರಮದ ‘ಈದ್ ಉಲ್ ಫಿತ್ರ್’ (Eid Ul Fitr) ಹಬ್ಬವನ್ನು ಮುಸ್ಲಿಂ ಬಾಂಧವರು ಆಚರಿಸಲಿದ್ದಾರೆ. ಇಂದು ಮುಸ್ಸಂಜೆ ಶವ್ವಾಲ್ (Shawwal) ತಿಂಗಳ ಪ್ರಥಮ ಚಂದ್ರ ದರ್ಶನವಾಗಿರುವ ಹಿನ್ನೆಲೆ ದಕ್ಷಿಣಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹಬ್ಬ ಆಚರಿಸುವಂತೆ ಜಿಲ್ಲಾ ಖಾಝಿಗಳು (Khaji) ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ದಕ್ಷಿಣಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಾಗೂ ಉಡುಪಿ ಜಿಲ್ಲಾ ನಾಯಿಬ್ ಖಾಝಿ ಉಸ್ತಾದ್ ಬಿ.ಕೆ. ಅಬ್ದುರ್ರಹ್ಮಾನ್ ಮದನಿ ಮೂಳೂರು ಅವರು ಚಂದ್ರದರ್ಶನವನ್ನು ಖಚಿತಪಡಿಸಿದ್ದು, ಶುಕ್ರವಾರ ಈದ್ ಹಬ್ಬ (Eid fest) ಆಚರಿಸಲು ಕರೆ ನೀಡಿದ್ದಾರೆ. ಈ ಕುರಿತು ಉಡುಪಿ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ. ಬಾವು ಮೂಳೂರು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಉಪವಾಸ ಮುಕ್ತಾಯ: ಕಳೆದ ಒಂದು ತಿಂಗಳಿನಿಂದ ರಂಜಾನ್ (Ramzan)ಉಪವಾಸ ಆಚರಿಸುತ್ತಿದ್ದ ಮುಸ್ಲಿಮ್ ಬಾಂಧವರಿಗೆ ಇಂದು ಚಂದ್ರದರ್ಶನದ (Moon sighting) ಮೂಲಕ ಉಪವಾಸ ಮುಕ್ತಾಯವಾಗಿದೆ. ಮುಸ್ಲಿಂ ಬಾಂಧವರ ಒಂದು ತಿಂಗಳ ಕಠಿಣ ಉಪವಾಸ ನಂತರ ರಂಜಾನ್ ಸಂಭ್ರಮ ಮನೆಮಾಡಿದೆ. ಈದ್ ಹಬ್ಬದ ಹಿನ್ನೆಲೆ ನಾಳೆ ಬೆಳಿಗ್ಗೆ ಕರಾವಳಿ ಜಿಲ್ಲೆಗಳ ಎಲ್ಲಾ ಮಸೀದಿ ಹಾಗೂ ಈದ್ಗಾ ಮೈದಾನಗಳಲ್ಲಿ ಈದ್ ಉಲ್ ಫಿತ್ರ್ ನಿಮಿತ್ತ ವಿಶೇಷ ಪ್ರಾರ್ಥನೆ ಸಲ್ಲಿಕೆಯಾಗಲಿದೆ.
