Karwar ಇಲ್ಲಿನ ಆರ್‌ಟಿಒ (RTO) ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸದೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ.
ಮುಂಜಾನೆ ಕಚೇರಿಗೆ ಆಗಮಿಸಿದ ಅಧಿಕಾರಿಗಳು ಕಂಪ್ಯೂಟರ್ ಹಾಗೂ ಫ್ಯಾನ್ ಸ್ವಿಚ್ ಆನ್ ಮಾಡಿದ ವೇಳೆ ಏಕಾಏಕಿ ವಿದ್ಯುತ್ ತಂತಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ವ್ಯಾಪಿಸಿ ಕಚೇರಿಯಲ್ಲಿದ್ದ ಕಂಪ್ಯೂಟರ್ ವೈರ್‌ಗಳು ಸುಟ್ಟು ಕರಕಲಾಗಿವೆ.
ತಕ್ಷಣ ಎಚ್ಚೆತ್ತ ಸಿಬ್ಬಂದಿ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದ್ದು, ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ.
