ಚಳಿಗಾಲದ ಸಂದರ್ಭದಲ್ಲಿ ಗೂಡು ಕಟ್ಟಿ ಮೊಟ್ಟೆಯಿಡಲು ವಿದೇಶಿ ಪಕ್ಷಿಗಳು ಕರ್ನಾಟಕದ ಕರಾವಳಿಗೆ ಆಗಮಿಸುವಂತೆ, ಚುನಾವಣೆಯ ಹೊಸ್ತಿಲಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ನಾಯಕತ್ವಕ್ಕಾಗಿ ವಲಸಿಗ ಮುಖಂಡರ ಆಗಮನ ಪ್ರಾರಂಭವಾಗಿದೆ.
ಒಂದು ಕಾಲದಲ್ಲಿ ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನ ಭದ್ರ ಕೋಟೆಯಾಗಿತ್ತು. ಇತ್ತೀಚೆಗೆ ವಲಸಿಗ ನಾಯಕರ ಆಗಮನದಿಂದ ಸ್ಥಳೀಯ ನಾಯಕರು ಮೂಲೆಗುಂಪಾಗಿ ಕಾರ್ಯಕರ್ತರು ವಿವಿಧ ಪಕ್ಷಗಳ ಆಶ್ರಯ ಪಡೆಯುತ್ತಿದ್ದಾರೆ.
2023 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಅವರಿಗೆ ಟಿಕೆಟ್ ತಪ್ಪಿಸಿ ಕ್ಷೇತ್ರದವರಲ್ಲದ ವಲಸಿಗ ಅಭ್ಯರ್ಥಿ ನಿವೇದಿತ್ ಆಳ್ವಾ ಅವರನ್ನು ಕಣಕ್ಕಿಳಿಸಲಾಗಿತ್ತು. ನೇರವಾಗಿ ಹೈ ಕಮಾಂಡ್ ಮೇಲೆ ಪ್ರಭಾವ ಬೀರಿ ಟೆಕೆಟ್ ತಂದ ನಿವೇದಿತ್ ಆಳ್ವಾ ಅವರು ಕೇವಲ 19270 ಮತ ಪಡೆಯುವ ಮೂಲಕ ಪ್ರಭಲ ಪ್ರತಿಸ್ಪರ್ಧಿಯೂ ಆಗದೇ ಮೂರನೇ ಸ್ಥಾನಕ್ಕೆ ಇಳಿದು ಸೋತು ಸುಣ್ಣವಾಗಿದ್ದರು.
2023 ರಲ್ಲಿ ಗೆದ್ದ ಬಿಜೆಪಿಯ ದಿನಕರ ಶೆಟ್ಟಿ ಅವರ ವಿರುದ್ಧ ಸೋತ ನಿವೇದಿತ್ ಆಳ್ವಾ ಅವರು ಪಡೆದ ಮತಗಳ ಅಂತರವೇ 40695. ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಇಡಗಂಟು ಕಳೆದುಕೊಳ್ಳಲು ಪ್ರಮುಖ ಕಾರಣವೇ ವಲಸಿಗ ಅಭ್ಯರ್ಥಿ ಎಂಬುದಾಗಿ ಹೇಳಲಾಗಿತ್ತು.
2023 ರಲ್ಲಿ ಕಾಂಗ್ರೆಸ್ ನ ಶಾರದಾ ಶೆಟ್ಟಿಯವರ ಹೊರತಾಗಿಯೂ 12 ಜನ ಟಿಕೆಟ್ ಆಕಾಂಕ್ಷಿಗಳಿದ್ದರು. ಹಿರಿಯ ಕಾಂಗ್ರೆಸ್ ನಾಯಕರಾದ ಹೊನ್ನಪ್ಪ ನಾಯಕ, ಸೇವಾದಳದ ಆರ್.ಎಚ್. ನಾಯ್ಕ, ಮಾಜಿ ಜಿ.ಪಂ ಸದಸ್ಯ ರತ್ನಾಕರ ನಾಯ್ಕ, ಎಮ್.ಎಲ್ ನಾಯ್ಕ ಸೇರಿದಂತೆ ಅನೇಕರು ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಟಿಕೆಟ್ ಆಕಾಕ್ಷಿಗಳು ಎರಡು ಲಕ್ಷದ ಡಿ.ಡಿ ಯೊಂದಿಗೆ ಅರ್ಜಿ ಸಲ್ಲಿಸಬೇಕು ಎಂಬ ಕೆ.ಪಿ.ಸಿ.ಸಿ ನಿಯಮವನ್ನು ಪಾಲಿಸಿದ್ದರು.

ಆದಾಗ್ಯೂ ವಲಸಿಗ ಹಕ್ಕಿಯಂತೆ ಕ್ಷೇತ್ರದ ಟಿಕೆಟ್ ಹಿಡಿದು ಹಾರಿಕೊಂಡು ಬಂದಿದ್ರು ನಿವೇದಿತ್ ಆಳ್ವಾ. ಪ್ರಬಲ ವಿರೋಧ ಪಕ್ಷಗಳಾದ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ನ ಅಲೆಗೆ ಸಿಲುಕುವ ಮೊದಲೇ, ನಿವೇದಿತ್ ಸ್ವ- ಪಕ್ಷದ ಟಿಕೆಟ್ ಆಕಾಂಕ್ಷಿಗಳ ಅಪಪ್ರಚಾರದ ಅಲೆಗೆ ಕೊಚ್ಚಿ ಹೋಗಿದ್ದರು.
ಈ ಎಲ್ಲಾ ವಿದ್ಯಮಾನಗಳು ಮಾಸುವ ಮೊದಲೇ ಈಗ ಕುಮಟಾ ಕ್ಷೇತ್ರಕ್ಕೆ ಮತ್ತೊಂದು ವಲಸಿಗ ಮುಖಂಡೆಯ ಆಗಮನವಾಗಿದೆ. ಹೌದು, ಬೆಂಗಳೂರು ಮೂಲದ ಸುಶ್ಮಾ ರಾಜಗೋಪಾಲ ರೆಡ್ಡಿ ಈಗ ಕುಮಟಾ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟ ವಲಸಿಗ ನಾಯಕಿಯಾಗಿದ್ದಾರೆ. ಮೂಲತಃ ಹೊನ್ನಾವರದವರೆಂದು ಹೇಳಿಕೊಳ್ಳುವ ಇವರು ಶಿರಸಿಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ದಿವಂಗತ ದೀಪಕ್ ಹೊನ್ನಾವರ ಅವರ ಸಹೋದರಿ.
ಸುಶ್ಮಾ ರಾಜಗೋಪಾಲ್ ರೆಡ್ಡಿ ಅವರು ಬೆಂಗಳೂರಿನ ರಾಜಕಾರಣಿ ಕಮ್ ಸಾಮಾಜಿಕ ಹೋರಾಟಗಾರ ಎಚ್.ಪಿ ರಾಜಗೋಪಾಲ ರೆಡ್ಡಿ ಅವರ ಪತ್ನಿಯಾಗಿದ್ದು, ಕುಮಟಾ ಹೊನ್ನಾವರ ಕ್ಷೇತ್ರದ ಟಿಕೆಟ್‌ಗಾಗಿಯೇ ಕಣ್ಣಿಟ್ಟು ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಒಟ್ಟಾರೆ ಕಾಂಗ್ರೆಸ್ ನ ಭದ್ರ ಕೋಟೆಯಲ್ಲಿಯೇ ಸೂಕ್ತ ಹಾಗೂ ಪ್ರಬಲ ಅಭ್ಯರ್ಥಿ ಹುಡುಕಲು ವಿಫಲವಾದ ಹೈ ಕಮಾಂಡ್ ಬೇರೆ ಕ್ಷೇತ್ರದ ನಾಯಕರಿಗೆ ಇಲ್ಲಿನ ಟಿಕೆಟ್ ನೀಡಿ ಕಾರ್ಯಕರ್ತರ ಮೇಲೆ ಹೇರಿಕೆ ರಾಜಕಾರಣಕ್ಕೆ ಮುಂದಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಯ ಇಡಗಂಟು ಹೋಗಿತ್ತು, ಈ ಬಾರಿ ಇಡಗಂಟಿನ ಜೊತೆಗೆ ಮೂಲ ಗಂಟು ಕೂಡಾ ಹೋಗುವ ಸಾಧ್ಯತೆಗಳಿವೆ ಎಂಬ ಮಾತು ರಾಜಕೀಯ ಪಡಸಾಲೆಯಿಂದ ಕೇಳಿಬಂದಿದೆ.
