ಕಾರವಾರ ನಗರದಲ್ಲಿರುವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಇಂದು ವಾರ್ಷಿಕ ಶ್ರದ್ಧಾ, ಮೇಧಾ, ಪ್ರಜ್ಞಾ ಸೂಕ್ತ ಪಾರಾಯಣ ಹಾಗೂ ಹವನ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನಗಳ ಜತೆ ದೀಪೋತ್ಸವದೊಂದಿಗೆ ಸಂಪನ್ನಗೊಂಡಿತು.

ಕ್ಷೇತ್ರದ ಅರ್ಚಕ ಲಕ್ಷ್ಮೀನಾರಾಯಣ ಭಟ್ ನೇತೃತ್ವದಲ್ಲಿ ಹಾಗೂ ದೇವಸ್ಥಾನದ ಆಡಳಿತ ಸಮಿತಿಯ ಸಹಯೋಗದಲ್ಲಿ ಪ್ರತೀ ವರ್ಷ ಈ ಧಾರ್ಮಿಕ ಕಾರ್ಯ ನಡೆಯುತ್ತಿದ್ದು, ಸಾವಿರಾರು ಭಕ್ತಾಧಿಗಳು ಕ್ಷೇತ್ರಕ್ಕೆ ಭೇಟಿ ನೀಡಿ ಪುನೀತರಾಗುತ್ತಾರೆ. ವರ್ಷಂಪ್ರತಿಯಂತೆ ಈ ಬಾರಿಯೂ 43 ದಿನ ಪಾರಾಯಣ, ಮೂರು ದಿನ ಸ್ಥಾಪನೆಯ ಧಾರ್ಮಿಕ ಪ್ರಕ್ರಿಯೆ, ಹವನ ಹಾಗೂ ಕೊನೆಯ ದಿನ ದೀಪೋತ್ಸವದೊಂದಿಗೆ ಧಾರ್ಮಿಕ ಕಾರ್ಯಕ್ರಮ ಸಂಪೂರ್ಣಗೊಂಡಿತು.

ಭಕ್ತಾಧಿಗಳ ಮಕ್ಕಳ ಶಿಕ್ಷಣ, ಆರೋಗ್ಯ, ಉದ್ಯೋಗ, ಸುಖ ಸಂಪತ್ತು ಪ್ರಾಪ್ತಿಯ ಉದ್ದೇಶದಿಂದ ಶ್ರೀ ದೇವಿ ಶಾರದೆಗೂ ವಿಶೇಷ ಪೂಜೆ, ಪುನಸ್ಕಾರಗಳನ್ನು ಸಲ್ಲಿಸಲಾಯಿತು.
ದೇವಸ್ಥಾನದ ಪ್ರಾಂಗಣದಲ್ಲಿ ಸಾವಿರಾರು ಭಕ್ತಾಧಿಗಳು ಸಹಸ್ರ ಸಂಖ್ಯೆಯಲ್ಲಿ ದೀಪಗಳನ್ನು ಉರಿಸುವ ಮೂಲಕ ದೀಪೋತ್ಸವ ನಡೆಸಿದರು. ಅಲ್ಲದೇ, ಶ್ರೀ ವಿನಾಯಕ ದೇವರ ಬಳಿ ಇಷ್ಟಾರ್ಥ ಪ್ರಾಪ್ತಿಗಾಗಿ ಪೂಜೆ, ಪ್ರಾರ್ಥನೆ ಸಲ್ಲಿಸಿ ಭಕ್ತಾಧಿಗಳು ಪುನೀತರಾದರು.
