Karwar| ಉತ್ತರ ಕನ್ನಡ ಜಿಲ್ಲೆಯ ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ವಿವಿಧ ಪ್ರಮುಖ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರು.

ಮುಖ್ಯವಾಗಿ ಕಾಚೆಗುಡ–ಮುರುಡೇಶ್ವರ ಎಕ್ಸ್‌ಪ್ರೆಸ್ (12789/90) ರೈಲನ್ನು ಕುಮಟಾ ರೈಲ್ವೆ ನಿಲ್ದಾಣದವರೆಗೆ ವಿಸ್ತರಿಸುವಂತೆ ಈ ಸಂದರ್ಭದಲ್ಲಿ ಸಚಿವರಿಗೆ ಒತ್ತಾಯಿಸಿ, ಜಿಲ್ಲೆಯ ಪ್ರಯಾಣಿಕರ ಹಿತದೃಷ್ಟಿಯಿಂದ ಈ ವಿಸ್ತರಣೆ ಅತ್ಯಂತ ಅಗತ್ಯವಾಗಿದ್ದು, ಇದರಿಂದ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಂಸದರು ಸಚಿವರಿಗೆ ವಿವರಿಸಿದರು.

ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಕುಮಟಾವರೆಗೆ ರೈಲು ವಿಸ್ತರಣೆಗೆ ಸಂಬಂಧಿಸಿದಂತೆ ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೂ ಈ ಹಿಂದೆ ಮನವಿ ಸಲ್ಲಿಸಿ ಚರ್ಚೆ ನಡೆಸಲಾಗಿತ್ತು. ಜಿಲ್ಲೆಯ ರೈಲ್ವೆ ಯೋಜನೆಗಳ ವೇಗದ ಅನುಷ್ಠಾನಕ್ಕಾಗಿ ಸಚಿವರ ಭೇಟಿಯೂ ಹಾಗೂ ಅವರ ಸಕಾರಾತ್ಮಕ ಸ್ಪಂದನೆಯೂ ಆಶಾದಾಯಕವಾಗಿದೆ ಎಂದು ಸಂಸದರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.