ಕಾರವಾರ: ತಾಲೂಕಿನ ಕದ್ರಾ ನಿವಾಸಿ ರಿಶೆಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದ ಆರೋಪಿ ಚಿರಾಗ್ ಕೊಠಾರಕರ್ ಗೆ ಧಾರವಾಡ ಹೈ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಜನವರಿ 9 ರಂದು ಚಿರಾಗ್ ನ ಸ್ನೇಹಿತೆಯಾಗಿದ್ದ ಯುವತಿ  ರಿಶೆಲ್ ಕ್ರಿಸ್ತೋದ್ ಡಿಸೋಜಾ ಕದ್ರಾದ‌ ಕೆಪಿಸಿ ಕಾಲೋನಿಯಲ್ಲಿರುವ  ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳ ಆತ್ಮಹತ್ಯೆಗೆ ಜೆಡಿಎಸ್ ಮುಖಂಡೆ ಚೈತ್ರಾ ಕೊಠಾರಕರ್ ಮಗ ಚಿರಾಗನ ಕಿರುಕುಳವೇ ಕಾರಣ ಎಂದು  ರಿಶೆಲ್ ತಂದೆ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಆರೋಪಿ ಚಿರಾಗ್  ತಲೆಮರೆಸಿಕೊಂಡಿದ್ದ.

ಆರೋಪಿ‌ಯನ್ನು ಕೂಡಲೇ ಬಂಧಿಸಬೇಕು ಎಂದು ಕಾರವಾರದಲ್ಲಿ ಬೃಹತ್ ಪ್ರತಿಭಟನೆಯನ್ನು ಮೃತ ರಿಶೆಲ್ ಪರ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಕರ್ತವ್ಯ ಲೋಪದ ಆರೋಪದಡಿ ಕದ್ರಾ ಪಿಎಸ್ಐ ಸುನೀಲ್ ಅವರನ್ನು ಅಮಾನತು ಮಾಡಲಾಗಿತ್ತು.

ಸಾಕಷ್ಟು ಒತ್ತಡಗಳ ಬಳಿಕ ಜನವರಿ 30 ರಂದು ಚೆನ್ನೈನಲ್ಲಿನ ತನ್ನ ಅಂಕಲ್ ಮನೆಯಲ್ಲಿ  ಆರೋಪಿ ಚಿರಾಗ್ ಕೊಠಾರ್‌ಕರ್‌ನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಕಾರವಾರದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದಲ್ಲೂ ಚಿರಾಗ್ ಜಾಮೀನು ಅರ್ಜಿಯನ್ನು ತಿರಸ್ಕೃತವಾಗಿತ್ತು. ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕಾರಗೊಂಡ ಹಿನ್ನೆಲೆ ಕೊಠಾರ್‌ಕರ್‌ ಕುಟುಂಬ ಧಾರವಾಡ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿತ್ತು.

ಧಾರವಾಡ ಹೈ ಕೋರ್ಟ್ ಆರೋಪಿ ಚಿರಾಗ್ ಕೊಠಾರಕರ್ ಗೆ ₹1 ಲಕ್ಷ ಬಾಂಡ್ ಹಾಗೂ ಇಬ್ಬರು ಜಾಮೀನು ಭದ್ರತೆ ಜೊತೆ ಹಲವು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.