ಸಿಎಂ ಸಿದ್ಧರಾಮಯ್ಯ ಮಾರ್ಚ್ 6 ರಂದು ತಮ್ಮ 17 ನೇ ಬಜೆಟ್ ಮಂಡಿಸಲು ಉದ್ದೇಶಿಸಲಾಗಿದ್ದು ಈ ಬಜೆಟ್‌ನಲ್ಲಿ  ಉತ್ತರಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಮಾಡುತ್ತಾರೆ ಎಂಬ ಸ್ಪಷ್ಟ ಮಾಹಿತಿ newswaveskannada.comಗೆ ಸಿಕ್ಕಿದೆ.

ಈ ಮೂಲಕ ಉತ್ತರಕನ್ನಡ ಜಿಲ್ಲೆಯ ಜನರ ಮೂರು ದಶಕಗಳ ಹೋರಾಟಕ್ಕೆ ಈ ಬಾರಿ ಗೆಲುವು ಸಿಗಲಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಸಾಕಷ್ಟು  ಹೋರಾಟಗಳು, ರಕ್ತ ಪತ್ರ ಅಭಿಯಾನಗಳೂ ನಡೆದಿತ್ತು. ಹಿಂದೆ ಬಿಜೆಪಿ ಸರಕಾರವಿದ್ದಾಗ ಮಾಜಿ ಶಾಸಕಿ ರೂಪಾಲಿ ನಾಯ್ಕ್ ಸಾಕಷ್ಟು ಪತ್ರಗಳನ್ನು ಬರೆದ ಪರಿಣಾಮ ಕೊನೆಗೂ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತರಲು ಬಿಜೆಪಿ ಸರಕಾರ ಮುಂದಾಗಿತ್ತು.

ಆದರೆ, ಚುನಾವಣೆಯ ಹೊಸ್ತಿಲಲ್ಲಿದ್ದ ಕಾರಣ ಜಾಗ ಅಂತಿಮಗೊಳಿಸುವ ಮುನ್ನವೇ ಬಿಜೆಪಿ ಸರಕಾರ ಅಧಿಕಾರ ಕಳೆದುಕೊಂಡಿತ್ತು. ಬಳಿಕ ಚುನಾವಣೆ ಸಂದರ್ಭ ಸಚಿವ ಮಾಂಕಾಳು ವೈದ್ಯ ಹಾಗೂ ಶಾಸಕ ಸತೀಶ್ ಸೈಲ್ ಕೂಡಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಭರವಸೆ ನೀಡಿದ್ದರಾದ್ರೂ ಸಾಕಷ್ಟು ಸಮಯಗಳಿಂದ ಅದು ಈಡೇರಿರಲಿಲ್ಲ‌.

ಜಿಲ್ಲೆಯ ಬೇಡಿಕೆ ಈಡೇರದ್ದನ್ನು ಕಂಡು ಶಾಸಕ ಸತೀಶ್ ಈ ಬಾರಿ ಬಜೆಟ್‌ನಲ್ಲಿ ಸರಕಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ ಮಾಡದಿದ್ರೆ ತಾನು ರಾಜಕೀಯ ಜೀವನದಿಂದಲೇ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದ್ದರು. ಅಲ್ಲದೇ, ಸಿಎಂ ಹಾಗೂ ಡಿಸಿಎಂ ಬಳಿ ಸಾಕಷ್ಟು ಬಾರಿ ಆಸ್ಪತ್ರೆಗಾಗಿ ಮನವಿ ಮಾಡಿಕೊಂಡಿದ್ದರು. ಇದೀಗ ಮಾಜಿ ಶಾಸಕಿ, ಹಾಲಿ ಶಾಸಕ ಹಾಗೂ ಜಿಲ್ಲೆಯ ಇತರ ಜನಪ್ರತಿನಿಧಿಗಳ ಪ್ರಯತ್ನದ ಫಲವಾಗಿ ಈ ಬಾರಿ ಬಜೆಟ್‌ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆಯಾಗುವ ಬಗ್ಗೆ ಮಾಹಿತಿ ದೊರಕಿದ್ದು, ಶೀಘ್ರದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ.

ಅಲ್ಲದೇ, ಕಷ್ಟದ ಸಮಯದಲ್ಲಿ ಚಿಕಿತ್ಸೆ ದೊರಕದೇ ಉತ್ತರಕನ್ನಡ ಜಿಲ್ಲೆಯಲ್ಲಿ ಸಾಯುವವರು ಸಂಖ್ಯೆಯೂ ಕಡಿಮೆಯಾಗುವುದರ ಜತೆಗೆ ಜಿಲ್ಲೆಯಲ್ಲಿ ಜನರಿಗೆ ಉತ್ತಮ ವೈದ್ಯಕೀಯ ಸವಲತ್ತುಗಳು ದೊರೆಯಲಿದೆ.