ಕಾರವಾರ: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ (e-KYC) ಮಾಡಿಸಬೇಕು ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಈ ಕುರಿತು ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ಪಿ. ನಾಯ್ಕ ಸ್ಪಷ್ಟಪಡಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ₹2,000 ಸಹಾಯಧನ ಪಡೆಯುತ್ತಿರುವ ಫಲಾನುಭವಿಗಳು ಹಣವು ಯಾವುದೇ ತೊಂದರೆಯಿಲ್ಲದೆ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದ್ದರೆ, ಸೈಬರ್ ಸೆಂಟರ್, ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 3,12,818 ಅರ್ಹ ಫಲಾನುಭವಿಗಳ ಗುರಿ ನಿಗದಿಯಾಗಿದ್ದು, ಈಗಾಗಲೇ ನೋಂದಾಯಿತ ಫಲಾನುಭವಿಗಳಿಗೆ 2026ರ ಏಪ್ರಿಲ್ ತಿಂಗಳವರೆಗಿನ ಸಹಾಯಧನವನ್ನು ಡಿಬಿಟಿ (DBT) ಮೂಲಕ ಯಶಸ್ವಿಯಾಗಿ ಪಾವತಿಸಲಾಗಿದೆ.

ಇತ್ತೀಚೆಗೆ ಯೂಟ್ಯೂಬ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ತಪ್ಪು ಮಾಹಿತಿಯಿಂದ ಹಲವರು ಇ-ಕೆವೈಸಿ ಮಾಡಿಸಿಕೊಳ್ಳಲು ವಿವಿಧ ಸೇವಾ ಕೇಂದ್ರಗಳಿಗೆ ಭೇಟಿ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಸರ್ಕಾರದಿಂದ ಈ ಸಂಬಂಧ ಯಾವುದೇ ಮಾರ್ಗಸೂಚಿ ಅಥವಾ ಅಧಿಕೃತ ಸೂಚನೆ ಹೊರಡಿಸಿಲ್ಲ ಎಂದು ಸತೀಶ್ ನಾಯ್ಕ ತಿಳಿಸಿದ್ದಾರೆ.

ಹೀಗಾಗಿ, ಫಲಾನುಭವಿಗಳು ಸುಳ್ಳು ಸುದ್ದಿಗಳು ಮತ್ತು ವದಂತಿಗಳಿಗೆ ಕಿವಿಗೊಡದೆ, ಅನಗತ್ಯವಾಗಿ ಹಣ ಮತ್ತು ಸಮಯ ವ್ಯರ್ಥ ಮಾಡಿಕೊಳ್ಳಬಾರದು ಎಂದು ಅವರು ಮನವಿ ಮಾಡಿದ್ದಾರೆ.