Karwar| ದ್ವಿಚಕ್ರ ವಾಹನದಲ್ಲಿ ಗೋವಾ ಮದ್ಯವನ್ನು ಕಾಡಿನ ದಾರಿಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ, ಸುಮಾರು ₹86 ಸಾವಿರ ಮೌಲ್ಯದ ಮದ್ಯ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡ ಘಟನೆ ಕಾರವಾರ ತಾಲೂಕಿನ ಮುಡಗೇರಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಹೊಂಡಾ ಆ್ಯಕ್ಟಿವಾ ದ್ವಿಚಕ್ರ ವಾಹನದಲ್ಲಿ ಎರಡು ನೈಲಾನ್ ಚೀಲಗಳ ಮೂಲಕ ಮದ್ಯ ಸಾಗಿಸಲಾಗುತ್ತಿತ್ತು. ಪರಿಶೀಲನೆ ವೇಳೆ ಚೀಲಗಳಲ್ಲಿ 72 ಲೈಟ್ ಹಾರ್ಸ್ ವಿಸ್ಕಿ ಬಾಟಲಿಗಳು ಸೇರಿದಂತೆ ಒಟ್ಟು 54 ಲೀಟರ್ ಗೋವಾ ಮದ್ಯ ಪತ್ತೆಯಾಗಿದೆ. ಜಪ್ತುಗೊಂಡ ಮದ್ಯದ ಅಂದಾಜು ಮೌಲ್ಯ ₹86 ಸಾವಿರ ಎಂದು ತಿಳಿದುಬಂದಿದೆ.

ದಾಳಿ ವೇಳೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಕಾರವಾರ ವಲಯದ ಅಬಕಾರಿ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.