ಕಾರವಾರದ ಶಿವಾಜಿ ಮಹಾವಿದ್ಯಾಲಯದಲ್ಲಿ ತಾಲೂಕಾ 9 ನೇ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಆಚರಿಸಲಾಯಿತು. ಸಮ್ಮೇಳದ ಸರ್ವಾಧ್ಯಕ್ಷರಾದ ಸಾಹಿತಿ ಜಿ.ಡಿ ಗೋವಿಂದ ಕುಮಾರ ಮಾತನಾಡಿ “ಕಾರವಾರ ಹಾಗೂ ಅಂಕೋಲಾ ಭಾಗದಲ್ಲಿ ಕನ್ನಡದ ನಾಟಕಗಳು ಕನ್ನಡ ಭಾಷಾ ಪ್ರೇಮವನ್ನು ಇನ್ನಷ್ಟು ಗಟ್ಟಿಗೊಳಿಸಿವೆ.
ಕಾರವಾರಕ್ಕೆ ಮರ್ನಾಲ್ಕು ರಾಷ್ಟ್ರೀಯ ಯೋಜನೆಗಳು ಬಂದಿವೆ. ಅದರಿಂದಲೇ ದೇಶದ ವಿವಿಧ ಭಾಷಿಗರು ಇಲ್ಲಿ ನೆಲೆಸಿದ್ದಾರೆ. ಕೊಂಕಣಿಗರ ಜತೆಗೆ ಹಿಂದಿ, ಇಂಗ್ಲಿಷ್, ತುಳು, ತೆಲಗು, ಮರಾಠಿ, ಉರ್ದು, ಗುಜರಾತಿ, ಬಂಗಾಳಿ, ಒರಿಸಾ ಸೇರಿದಂತೆ ಹಲವು ಭಾಷಿಗರು ಇದ್ದಾರೆ ಎಂದರು.
ಇಷ್ಟೆಲ್ಲ ಭಾಷಿಕರ ನಡುವೆಯೂ ಕಾರವಾರದಲ್ಲಿ ಕನ್ನಡಕ್ಕೆ ಅದರದ್ದೇ ಆದ ಒಲವಿದೆ. ಗಡಿನಾಡಾದರೂ ಕನ್ನಡ ನಾಟಕಗಳ ಪ್ರದರ್ಶನವು ಕನ್ನಡ ಪ್ರೇಮವನ್ನು ಗಟ್ಟಿಯಾಗಿಸಿವೆ ಎಂದ ಅವರು, ನಮ್ಮ ನಾಡಿನ ಆಚಾರ, ವಿಚಾರ, ಕಲೆ, ಸಂಸ್ಕೃತಿ, ಸಂಸ್ಕಾರ, ಬದುಕಿನ ಮೌಲ್ಯಗಳನ್ನ ಉಳಿಸಿಕೊಳ್ಳುವ ಅವಶ್ಯಕತೆ ಇದೆ. ಈ ಪಾಠವನ್ನು ಮಕ್ಕಳಿಗೂ ಕಲಿಸಬೇಕು ಎಂದರು.
ಜಿಲ್ಲೆಯಲ್ಲಿ ಹಾಲಕ್ಕಿ ಸಮುದಾಯ ಬೆಳೆದುಬಂದ ಹಾದಿ ಹಾಗೂ ಅವರ ಆಚಾರ ವಿಚಾರಗಳನ್ನು ಸಾಹಿತ್ಯದಲ್ಲಿ ಪರಿಚಯಿಸಿದ ರೀತಿಯ ಬಗ್ಗೆ ಅವಲೋಕಿಸಿದರು. ಭಾಷಣದುದ್ದಕ್ಕೂ ನಾಟಕ, ರಂಗ ಕಲೆಯ ಬಗ್ಗೆ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್ ವಾಸರೆ ಮಾತನಾಡಿ, ಗಡಿ ತಾಲೂಕುಗಳ ಕನ್ನಡ ಶಾಲೆಗಳನ್ನು ಅವೈಜ್ಞಾನಿಕ ಮಾನಂಡದಿAದ ಮುಚ್ಚುವ ಹುನ್ನಾರ ನಡೆದಿದೆ. ಅದು ನಡೆದರೆ ಅಂಗನವಾಡಿಗಳಿಗೂ ತೊಂದರೆಯಾಗುತ್ತದೆ. ಜಿಲ್ಲೆಯ ಹಾಲಕ್ಕಿಗಳು, ಕುಣಬಿಗಳು, ಗೊಂಡರು, ಗೌಳಿಗಳು ಪರಿಶಿಷ್ಟರಾದರೆ ಜಿಲ್ಲೆಯು ಮೀಸಲು ಕ್ಷೇತ್ರವಾಗುತ್ತದೆ. ಹೀಗಾಗಿಯೇ ಆಳುವವರು ವರ್ಷಗಳನ್ನು ಮುಂದೂಡುತ್ತಿದ್ದಾರೆ. ಮುಂದೆಯೂ ಹಾಗೆಯೇ ಮಾಡುತ್ತಾರೆ ಎಂದರು.
ತಾಕೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ ಮಾತನಾಡಿ, ” ಕಾರವಾರವು ಬಹುಭಾಷಿಕರ ತಾಲೂಕಾದರೂ ಎಂದಿಗೂ ಭಾಷೆಯ ವಿಷಯವಾಗಿ ಸಂಘರ್ಷ ನಡೆದಿಲ್ಲ. ಸಂಘಟನೆ ಕಟ್ಟುವುದು ಸುಲಭವಲ್ಲ. ಅದರಲ್ಲೂ ಭಾಷೆಯ ವಿಷಯವನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಕನ್ನಡದ ಎಲ್ಲ ಮನಸ್ಸುಗಳು ಒಂದಾಗಿ ತಾಯಿನುಡಿ ಉಳಿಸಬೇಕು ಎಂದರು.
ಶಾಸಕ ಸತೀಶ ಸೈಲ್ ಮಾತನಾಡಿ, ಕಾರವಾರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಉದ್ಘಾಟನೆ ಮಾಡಿಸುತ್ತಿದ್ದೇವೆ. ಮುಂದೆ ಅದನ್ನು ಸೂಪರ್ ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡುವ ಬೇಡಿಕೆ ಇಟ್ಟಿದ್ದೇವೆ. ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಆಗದಿದ್ದಲ್ಲಿ ರಾಜಿನಾಮೆ ನೀಡಲು ಸಿದ್ದನಿದ್ದೇನೆ ಎಂದು ಪುನರ್ ಉಚ್ಛರಿಸಿದರು. ಪಕ್ಕದ ಗೋವಾದಲ್ಲಿ ಕನ್ನಡಿಗರನ್ನು ಘಾಟಿಗಳು ಎಂದು ಕರೆಯುತ್ತಾರೆ. ಆದರೆ ಅಲ್ಲಿನ ಶೇ.75 ರಷ್ಟು ಕೈಗಾರಿಕೆಗಳ ಮಾಲೀಕರು ಹಾಗೂ ಅಧಿಕಾರಿಗಳು ಕನ್ನಡಿಗರೇ ಎನ್ನುವುದು ಹೆಮ್ಮೆ ಎಂದರು.
ನಿಕಟಪೂರ್ವ ಸಮ್ಮೇಳಾನಧ್ಯಕ್ಷೆ ಪ್ರೇಮಾ ಟಿಎಂಆರ್ ನಾಡಧ್ವಜವನ್ನು ಸಮ್ಮೇಳನಾಧ್ಯಕ್ಷರಿಗೆ ಹಸ್ತಾಂತರಿಸಿದರು. ಫ್ರೊ. ಜಯಪ್ರಕಾಶ ಶೆಟ್ಟಿ, ಪತ್ರಕರ್ತ ಗಂಗಾಧರ ಹಿರೇಗುತ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಮಂಗಲಾ ನಾಯ್ಕ, ಪಿ.ಆರ್ ನಾಯ್ಕ, ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ದೇವಿದಾಸ ನಾಯ್ಕ, ಖೈರುನಿಸಾ ಶೇಕ್, ರೋಹಿದಾಸ ನಾಯ್ಕ, ಜಿ.ಡಿ ಮನೋಜೆ, ಯಮುನಾ ಗಾಂವ್ಕರ, ಬಾಬು ಶೇಖ್ ಹಾಗೂ ಪರಿಷತ್ ಸದಸ್ಯರು, ಸಾರ್ವಜನಿಕರು ಇದ್ದರು.
ಇದನ್ನು ಓದಿ : ರುಂಡವಿಲ್ಲದ ಮಹಿಳೆ ಬೆತ್ತಲೆ ದೇಹ ಪತ್ತೆ
