Karwar| ಕಾರವಾರ ತಾಲೂಕಿನ ಬೇಳೂರು ಹಾಗೂ ಅಂಕೋಲಾ ತಾಲೂಕಿನ ಬೆಳಸೆ ಗ್ರಾಮಗಳಲ್ಲಿ ಕರ್ನಾಟಕ ರಾಜ್ಯ ಮಾರುಕಟ್ಟೆ ಸಂವಹನ ಮತ್ತು ಜಾಹೀರಾತು ಲಿಮಿಟೆಡ್‌ ವತಿಯಿಂದ ಸ್ಮಾರ್ಟ ವಿಲೇಜ್‌ ಪೈಲಟ್‌ ಕಾರ್ಯಕ್ರಮವನ್ನು ಆರಂಭಿಸಲಾಗುವುದು ಎಂದು KSMCA ಅಧ್ಯಕ್ಷ ಮತ್ತು ಶಾಸಕ ಸತೀಶ ಸೈಲ್‌ ತಿಳಿಸಿದ್ದಾರೆ.

ಈ ಎರಡು ಗ್ರಾಮಗಳನ್ನು ಸ್ಮಾರ್ಟ್ ವಿಲೇಜ್ ಆಗಿ ಅಭಿವೃದ್ಧಿ ಪಡಿಸುವ ಕುರಿತಂತೆ ಮಾಧ್ಯಮಗಳಿಗೆ‌ ಮಾಹಿತಿ ನೀಡಿದ ಸೈಲ್, ಈ ಕಾರ್ಯಕ್ರಮದ ಉದ್ದೇಶ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಉದ್ಯಮಶೀಲತೆಯನ್ನು ಉತ್ತೇಜಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಹಾಗೂ ಗ್ರಾಮೀಣ ಉತ್ಪನ್ನಗಳಿಗೆ ಸಂಘಟಿತ ಮಾರುಕಟ್ಟೆ ಪ್ರವೇಶವನ್ನು ಒದಗಿಸುವುದರ ಮೂಲಕ ಗ್ರಾಮಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸುವುದಾಗಿದೆ.

ಪೈಲಟ್‌ ಕಾರ್ಯಕ್ರಮದ ಅಡಿಯಲ್ಲಿ ಕೃಷಿ ಮತ್ತು ಸಹಾಯಕ ಚಟುವಟಿಕೆಗಳು, ಮೀನುಗಾರಿಕೆ, ಪರಂಪರಗಳ ಉತ್ಪನ್ನಗಳು, ಹಸ್ತಕರಕುಶಲ ವಸ್ತುಗಳು ಹಾಗೂ ಮಹಿಳಾ ಸ್ವಸಹಾಯ ಸಂಘಗಳ (SHG) ಆಧಾರಿತ ಉದ್ಯಮಗಳನ್ನು ಗುರುತಿಸಿ ಬೆಂಬಲ ನೀಡಲಾಗುವುದು. ಮಹಿಳೆಯರು ಮತ್ತು ಯುವಕರ ಸಬಲೀಕರಣ ಹಾಗೂ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಈ ಕಾರ್ಯಕ್ರಮದ ಪ್ರಮುಖ ಗುರಿಗಳಾಗಿವೆ.

ಈ ಯೋಜನೆಗೆ, SAMPATTI – Marketing, Branding and Advertising and Mentoring Support to Start -ups, MSME and Women Enterprises ಕಾರ್ಯಕ್ರಮದ ಅಡಿಯಲ್ಲಿ ತರಬೇತಿ, ಮಾರ್ಗದರ್ಶನ, ಬ್ರಾಂಡಿಂಗ್‌, ಪ್ಯಾಕೇಜಿಂಗ್‌, ಮತ್ತು ಮಾರುಕಟ್ಟೆ ಸಂರ್ಪಕದ ಸಮಗ್ರ ಬೆಂಬಲ ಒದಗಿಸಲಾಗುತ್ತದೆ. 12 ವಾರಗಳ ಅವಧಿಯಲ್ಲಿ ಈ ಪೈಲಟ್‌ ಯೋಜನೆಯಡಿ ಮೂಲಸಮೀಕ್ಷೆ, ಉದ್ಯಮ ಗುರುತಿಸುವುದು, ಸಾಮರ್ಥ್ಯ ವೃದ್ದಿ, ಡಿಜಿಟಲ್‌ ಸಬಲೀಕರಣ ಹಾಗೂ ಜಿಲ್ಲಾ ರಾಜ್ಯ ಮಟ್ಟದ ಮಾರುಕಟ್ಟೆಗಳಿಗೆ ಸಂರ್ಪಕ ಕಲ್ಪಿಸಲಾಗುತ್ತದೆ. ಯೋಜನೆಯನ್ನು ಗ್ರಾಮ ಪಂಚಾಯತ್‌ಗಳು ಹಾಗೂ ಸಂಬಂಧಿತ ಇಲಾಖೆ ಸಮನ್ವಯ ಸಾಧಿಸಿ ಅನುಷ್ಠಾನಗೊಳಿಸಲಾಗುತ್ತದೆ ಎಂದರು.

ಬೇಳೂರು ಮತ್ತು ಬೆಳಸೆ ಗ್ರಾಮಗಳಲ್ಲಿ ಜಾರಿಗೆ ಬರುತ್ತಿರುವ ಈ ಸ್ಮಾರ್ಟ ವಿಲೇಜ್‌ ಪೈಲಟ್‌ ಕಾರ್ಯಕ್ರಮವು ಉತ್ತರ ಕನ್ನಡ ಜಿಲ್ಲೆ ಹಾಗೂ ರಾಜ್ಯದ ಇತರ ಗ್ರಾಮಗಳಿಗೆ ಮಾದರಿಯಾಗಿ ವಿಸ್ತರಿಸಬಹುದಾದ ಯೋಜನೆಯಾಗಲಿದೆ ಎಂದು ಸೈಲ್‌ ತಿಳಿಸಿದ್ದಾರೆ.

ಈ ಯೋಜನೆಯಿಂದ 30-50 ಗ್ರಾಮಮಟ್ಟದ ಸ್ಥಿರ ಉದ್ಯಮಗಳು ಮತ್ತು ಕುಟುಂಬ ಆದಾಯದಲ್ಲಿ ಹೆಚ್ಚಳ ಹಾಗೂ ಗ್ರಾಮದಿಂದ ಮಾರುಕಟ್ಟೆಗೂ ಬಲವಾದ ಸಂರ್ಪಕ ಸಾಧಿಸುವ ನಿರೀಕ್ಷೆ ಯಿದೆ ಎಂದು ಶಾಸಕ ಸೈಲ್‌ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.