Karwar|Majali|ಶಿವರಾತ್ರಿ ಅಮವಾಸ್ಯೆಯ ಹಿನ್ನೆಲೆಯಲ್ಲಿ ಸಮುದ್ರ ಸ್ನಾನಕ್ಕೆ ಹೋಗಿದ್ದ ಯುವಕ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರವಾರದ ಮಾಜಾಳಿಯಲ್ಲಿ ನಡೆದಿದೆ.
ಮಾಜಾಳಿಯ ಯಶ್ ಶಾಮ್ ಮಹಾಲೆ (17) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಶಿವರಾತ್ರಿಯ ಅಮವಾಸ್ಯೆಯಂದು ಮಾಜಾಳಿಯ ಕಡಲತೀರದಲ್ಲಿ ರಾಮನಾಥ ದೇವರ ಪರಿವಾರ ದೇವರುಗಳಾದ ಏಳು ದೇವರ ಪಲ್ಲಕ್ಕಿಗಳು ಸಮದ್ರ ಸ್ನಾನಕ್ಕಾಗಿ ಆಗಮಿಸುತ್ತವೆ. ಈ ಸಂದರ್ಭದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿರುತ್ತದೆ.

ಮೃತ ಬಾಲಕ ಯಶ್ ಮಹಾಲೆ
ಕಾರವಾರ ಸೇರಿದಂತೆ ಗೋವಾದ ಜನರೂ ಕೂಡ ಈ ಅಮವಾಸ್ಯೆಯಂದು ಪಿತೃಗಳಿಗೆ ಪಡಿ ನೀಡಲು ಆಗಮಿಸುತ್ತಾರೆ.
ಈ ಆಚರಣೆ ಹಿನ್ನೆಲೆ ಮಾಜಾಳಿ ಕಡಲ ತೀರದಲ್ಲಿ ಸಾವಿರಾರು ಜನ ಸೇರಿ ಸಮುದ್ರಸ್ನಾನ ಮಾಡುತ್ತಾರೆ. ಇಂದು ಮುಂಜಾನೆ ಸಮುದ್ರ ಸ್ನಾನಕ್ಕೆ ಹೋಗಿದ್ದ ಯುವಕ ಯಶ್ ಶಾಮ್ ಮಹಾಲೆ ನೀರಿನಲ್ಲಿ ಮುಳುಗಿದ್ದು, ತಕ್ಷಣ ಸ್ಥಳೀಯರು ಹಾಗೂ ಕರಾವಳಿ ಕಾವಲು ಪಡೆಯ ಪೊಲೀಸರು ರಕ್ಷಣೆ ಮಾಡಿ ದಡಕ್ಕೆ ತಂದಿದ್ದಾರೆ.
ನೀರಿನಲ್ಲಿ ಮುಳುಗಿ ನೀರು ಕುಡಿದಿದ್ದ ಯುವಕ ಅಸ್ವಸ್ಥನಾಗಿದ್ದು, ಆತನನ್ನು ತಕ್ಷಣ ಕಾರವಾರದ ವೈದ್ಯಕೀಯ ವಿಜ್ಞಾನ ಕೇಂದ್ರಕ್ಕೆ ಸಾಗಿಸಿದ್ದಾರೆ. ಆದರೆ, ದಾರಿ ಮಧ್ಯೆ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
