ಬೆಂಗಳೂರು – ಕಾರವಾರದ ನಡುವೆ ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್‌ ರೈಲ್ವೆಯನ್ನು ರದ್ದುಗೊಳಿಸಿ ಈ ವೇಳೆಯಲ್ಲಿ ವಂದೇ ಭಾರತ್ ಹೈಸ್ಪೀಡ್ ರೈಲ್ವೆ ಓಡಿಸುವ ಹುನ್ನಾರ ನಡೆಯುತ್ತಿದ್ದು  ರೈಲ್ವೆ ಬಳಕೆದಾರರಲ್ಲಿ ಆತಂಕ ಸೃಷ್ಟಿಸಿದೆ.

ಹೌದು.. ನಿರಂತರವಾಗಿ ಬೆಂಗಳೂರಿನಿಂದ ಕಾರವಾರಕ್ಕೆ ಹಾಗೂ ಕಾರವಾರದಿಂದ ಬೆಂಗಳೂರಿಗೆ ಸಂಚರಿಸುವ ಬಡ ಹಾಗೂ ಮಧ್ಯಮವರ್ಗದ ಜನರು ಈ ಸುದ್ದಿಯಿಂದ ವಿಚಲಿತರಾಗಿದ್ದು, ಕೇವಲ 400 ರೂಪಾಯಿಯ ಹಾದಿ ಈಗ ನಾಲ್ಕು ಪಟ್ಟು ಅಂದರೆ 2500 ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಖಚಿತ ಮಾಹಿತಿ ಇಲ್ಲದಿದ್ದರು ಈ ಹುನ್ನಾರಕ್ಕೆ ಪುಷ್ಟಿ ನೀಡುವಂತೆ ರೈಲ್ವೆ ಇಲಾಖೆಯ IRCTS ಆ್ಯಪ್ ನಲ್ಲಿ ಏಪ್ರಿಲ್ 16  ರಿಂದ ನಂತರದ ದಿನಗಳ ಮುಂಗಡ ಟಿಕೇಟ್ ಅನ್ನು ತಡೆಹಿಡಿಯಲಾಗಿತ್ತು. ಸಾಮಾನ್ಯವಾಗಿ IRCTS ಯಲ್ಲಿ ಎರಡು ತಿಂಗಳ ಒಳಗಡೆಯ ಟಿಕೇಟ್ ಮಾತ್ರ ಕಾಯ್ಡಿರಿಸ ಬಹುದಾಗಿದೆ. ಆ ಹಿನ್ನೆಲೆಯಲ್ಲಿ ಇಂದು ಏಪ್ರಿಲ್ ತಿಂಗಳ 16 ನೇ ದಿನಾಂಕ ಸಂಚರಿಸುವ ರೈಲ್ವೆಯ ಮುಂಗಡ ಟಿಕೇಟ್ ಕಾಯ್ದಿರಿಸಲು ಅವಕಾಶ ನೀಡಬೇಕಿತ್ತು.

IRCTS ಆ್ಯಪ್ ನಲ್ಲಿ ಏಪ್ರಿಲ್‌ 16 ಹಾಗೂ 17 ರ ಟಿಕೇಟ್ ಬುಕ್ ಮಾಡಲು ನಿರ್ಬಂಧಿಸಿದ್ದು ಮುಂಬರುವ ಏಪ್ರಿಲ್ ನಿಂದ ಈ ಸಮಯದಲ್ಲಿ ಹಣವಂತರೇ ಹೆಚ್ಚು ಬಳಕೆ ಮಾಡಬಹುದಾದ ವಂದೇ ಭಾರತ್ ಹೈಸ್ಪೀಡ್ ಟ್ರೇನ್ ಬಿಡುವ ಹುನ್ನಾರ ನಡೆಸಲಾಗಿದೆಯಾ ಎಂಬ ಗುಮಾನಿ ಮಿಂಚಿನ ಸಂಚಾರದಂತೆ ಹಬ್ಬಿ ಕುಂದಾಪುರ ಹಾಗೂ ಉಡುಪಿಯ ಬಳಕೆದಾರರು ರೈಲ್ವೆ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆ ಏಪ್ರಿಲ್ 16 ಹಾಗೂ 17 ಮುಂಗಡ ಟಿಕೇಟ್ ಬುಕಿಂಗ್ ಗೆ ಅವಕಾಶ ಮಾಡಿಕೊಟ್ಟಿದೆ.

ಕಳೆದ ವಾರ ದಾಂಡೇಲಿಗೆ ಆಗಮಿಸಿದ್ದ ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಮಾತನಾಡಿ  ‘ಬೆಂಗಳೂರಿನಿಂದ ಕಾರವಾರಕ್ಕೆ ವಂದೇ ಭಾರತ್ ಹೈಸ್ಪೀಡ್ ರೈಲ್ವೆ ಬಿಡುವ ಪ್ರಸ್ಥಾವನೆ ಇಲಾಖೆಯ ಮುಂದಿದೆ. ಶೀಘ್ರದಲ್ಲಿಯೇ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜ್ಯಕ್ಕೆ ಬಂದು ಈ ನೂತನ ರೈಲ್ವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ’ ಎಂದಿದ್ದರು.

ನೂತನ ರೈಲ್ವೆ, ಅದರಲ್ಲೂ ಹೈಸ್ಪೀಡ್ ರೈಲ್ವೆ ಬರಲಿದೆ ಎಂದು ಜಿಲ್ಲೆಯ ಜನ ಖುಷಿ ಪಟ್ಟಿದ್ದರು. ಆದರೆ ಬಡವರು ಸಂಚರಿಸುವ ಪಂಚಗಂಗಾ ಎಕ್ಸ್‌ಪ್ರೆಸ್‌ ಬದಲಿಗೆ ವಂದೇಭಾರತ್ ಹೈಸ್ಪೀಡ್ ರೈಲ್ವೆ ಬಂದರೆ ಇದು ಬಡ ಹಾಗೂ ಮಧ್ಯಮ ವರ್ಗದವರ ಮೇಲೆ ಕೇಂದ್ರ ಸರ್ಕಾರ ಗಧಾ ಪ್ರಹಾರ ಮಾಡಿದಂತಾಗುತ್ತದೆ.

ಈ ವಂದೇ ಭಾರತ್ ಹೈಸ್ಪೀಡ್ ರೈಲ್ವೆ ಯೋಜನೆ ಕೇಂದ್ರ ಸರ್ಕಾರ ಮೀಸೆ ತಿರವಿಕೊಳ್ಳುವ ಯೋಜನೆಯಾದರೂ ದೇಶದ ಬಡ ಹಾಗು ಮಧ್ಯಮ ವರ್ಗದ ರೈಲ್ವೆ ಬಳಕೆದಾರಿಗೆ ಕೈಗೆಟುಕದ ಯೋಜನೆಯಾಗಿದೆ. ಸಾಮಾನ್ಯವಾಗಿ 100 ರೂಪಾಯಿಯಲ್ಲಿ ಕ್ರಮಿಸ ಬಹುದಾದ ದೂರವನ್ನು ವಂದೇ ಭಾರತದ ನಲ್ಲಿ 400 ರೂಪಾಯಿ ನೀಡಬೇಕಾಗಿದೆ. ಹಾಗಾಗಿ ಈ ವಂದೇ ಭಾರತ್ ರೈಲ್ವೆ ಶ್ರೀಮಂತರು ಮಾತ್ರ ಪ್ರಯಾಣ ಮಾಡಬಹುದಾದ ರೈಲ್ವೆ ಯೋಜನೆಯಾಗಿದೆ ಎಂಬುದು ಮಧ್ಯಮ ವರ್ಗದವರ ಅಳಲು.

ಶ್ರೀಮಂತ ಪ್ರಯಾಣಿಕರ ಪ್ರಯಾಣಕ್ಕೆ ಈ ಹೈ ಸ್ಪೀಡ್ ರೈಲ್ವೆ ಯೋಜನೆ ಮಾಡಿರುವುದಕ್ಕೆ ಯಾರ ವಿರೋಧವೂ ಇಲ್ಲ. ಕೇಂದ್ರ ಸರ್ಕಾರದ ಜನಸಾಮಾನ್ಯರು ಸಂಚರಿಸುವ ಪಂಚಗಂಗಾ ದಂತಹ ರೈಲ್ವೆಯನ್ನು ರದ್ದು ಗೊಳಿಸಿ ವಂದೇ ಭಾರತ್ ಹೈಸ್ಪೀಡ್ ಟ್ರೇನ್ ಬಿಡಲು ಮುಂದಾದರೆ ಭಾರೀ ವಿರೋಧ ಎದುರಿಸ ಬೇಕಾಗಬಹುದು ಎಂಬುದು ರೈಲ್ವೆ ಬಳಕೆದಾರರ ಅಭಿಪ್ರಾಯ.