ಇಂದು ದೇಶದೆಲ್ಲೆಡೆ ಮಹಾ ಶಿವರಾತ್ರಿಯ ಸಂಭ್ರಮ. ದೇಶದಾದ್ಯಂತ ಜನರು ಶಿವಾಲಯಗಳಿಗೆ ತೆರಳಿ ಜಗತ್‌ಪಿತನಾದ ಪರಮೇಶ್ವರನ ಚರಣಾರವಿಂದಕ್ಕೆ ತಲೆಬಾಗಿ ನಮಸ್ಕರಿಸಿ ಪುನೀತರಾಗುತ್ತಾರೆ.
ಶಿವ- ಪಾರ್ವತಿ ಒಂದಾದ ಈ ಮಹಾಶಿವರಾತ್ರಿಯ ದಿನದಂದು ಉತ್ತರಕನ್ನಡ ಜಿಲ್ಲೆಯಾದ್ಯಂತವೂ ಶಿವ ಆಲಯಗಳಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
ಇತಿಹಾಸ ಪ್ರಸಿದ್ಧವಾದ ಗೋಕರ್ಣದ ಶ್ರೀ ಮಹಾಬಲೇಶ್ವರ ಕ್ಷೇತ್ರ, ಶ್ರೀ ಮುರುಡೇಶ್ವರ ಕ್ಷೇತ್ರ, ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರ, ಶ್ರೀ ಮಧುಕೇಶ್ವರ ಕ್ಷೇತ್ರ ಸೇರಿದಂತೆ ಹಲವು ಶಿವ ಕ್ಷೇತ್ರಗಳಲ್ಲಿ ವಿಶೇಷ ಪೂಜೆ ಸಲ್ಲಿಕೆಯಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರಂತೂ ತಂಡೋಪತಂಡವಾಗಿ ಬಂದು ಶಿವನಿಗೆ ಭಕ್ತಿಯಿಂದ ಹೂವು- ಹಣ್ಣು, ಹಾಲು, ಎಳನೀರು, ಬಿಲ್ವಪತ್ರೆ ಮುಂತಾದವುಗಳನ್ನು ಸಮರ್ಪಿಸಿದ್ದಲ್ಲದೇ, ಮುಕ್ಕಣ್ಣನ ದರ್ಶನ ಪಡೆದು ಪುನೀತರಾಗಿದ್ದಾರೆ.

ಪವಿತ್ರ ಶಿವರಾತ್ರಿ ಉತ್ಸವದ ಹಿನ್ನೆಲೆ ಉತ್ತರಕನ್ನಡ ಜಿಲ್ಲೆಯ ಪ್ರತೀ ಶಿವಾಲಯಗಳಲ್ಲಿ ಪರಶಿವನ ದರ್ಶನ ಪಡೆಯಲು ಜನಸಾಗರವೇ ಹರಿದುಬಂದಿದೆ. ರಾಜ್ಯದ ವಿವಿಧ ಮೂಲೆಗಳಿಂದ ಹಾಗೂ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮುಂತಾದೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾಧಿಗಳು ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಶ್ರೀ ಮಹಾಬಲೇಶ್ವರ ಕ್ಷೇತ್ರ, ಶ್ರೀ ಮುರುಡೇಶ್ವರ ಕ್ಷೇತ್ರ, ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರ, ಶ್ರೀ ಮಧುಕೇಶ್ವರ ಕ್ಷೇತ್ರ ಮುಂತಾದ ಹಲವು ಶಿವ ಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಪರಶಿವನಿಗೆ ನವಧಾನ್ಯ, ಹೂವು, ಬಿಲ್ವಪತ್ರೆ, ಹಾಲು, ಎಳನೀರು ಹಾಗೂ ನೀರು ಅರ್ಪಿಸಿದ ಭಕ್ತರು ಶಿವನ ದರ್ಶನದಿಂದ ಪುನೀತರಾಗಿದ್ದಾರೆ. ಜಗತ್ ವಿಖ್ಯಾತ ಶ್ರೀ ಮುರುಡೇಶ್ವರ ಕ್ಷೇತ್ರಕ್ಕೆ ಬೆಳಕು ಹರಿಯುವ ಮುನ್ನವೇ ಭಕ್ತರು ಕಿಲೋಮೀಟರ್‌ಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಮುರುಡೇಶ್ವರನ ದರ್ಶನ ಪಡೆದು ವಿಶೇಷ ಸೇವೆ ಸಲ್ಲಿಸಿದ್ದಾರೆ.

ಇಂದು ದಿನವಿಡೀ ದೇಶ, ವಿದೇಶ ಹಾಗೂ ರಾಜ್ಯದ ಮೂಲೆ ಮೂಲೆಗಳಿಂದಲೂ ಲಕ್ಷಾಂತರ ಭಕ್ತಾಧಿಗಳು ಮುರುಡೇಶ್ವರನ ದರ್ಶನ ಪಡೆದಿದ್ದಾರೆ. ಭಕ್ತರ ಜತೆ ಭಟ್ಕಳ ತಹಶೀಲ್ದಾರ್ ನಾಗೇಂದ್ರ ಹಾಗೂ ಸಿಬ್ಬಂದಿ ಕ್ಷೇತ್ರಕ್ಕೆ ಪಾದಯಾತ್ರೆ ನಡೆಸಿ ಮುರುಡೇಶ್ವರನ ದರ್ಶನ ಪಡೆದಿದ್ದಾರೆ. ಇದರ ಜತೆ ಶಿವರಾತ್ರಿ ಹಿನ್ನೆಲೆ ಆರ್‌ಎಸ್‌ಎಸ್ ಭಟ್ಕಳ ಮಂಡಲದ ವತಿಯಿಂದ ಕ್ಷೇತ್ರದಲ್ಲಿ ಘೋಷ್ ವಾದನ ಕೂಡಾ ನಡೆಯಿತು.
ಭಗವಾಧ್ವಜ ಹಾರಿಸಿದ ಆರ್‌ಎಸ್ಎಸ್ ಸ್ವಯಂ ಸೇವಕರು ಕ್ಷೇತ್ರದ ಆವರಣದಲ್ಲಿ ಘೋಷ್ ವಾದನ ನುಡಿಸಿ ಶಿವರಾತ್ರಿಯ ಉತ್ಸವಕ್ಕೆ ಇನ್ನಷ್ಟು ಮೆರುಗು ನೀಡಿದರು.
ಇನ್ನು ಇತಿಹಾಸ ಪ್ರಸಿದ್ಧ ಗೋಕರ್ಣ ಶ್ರೀ ಮಹಾಬಲೇಶ್ವರ ಕ್ಷೇತ್ರದಲ್ಲಂತೂ ಆತ್ಮಲಿಂಗದ ದರ್ಶನಕ್ಕೆ ಭಕ್ತರು ಮುಗಿಬಿದ್ದಿದ್ದರೂ, ಗೋಕರ್ಣ ಪೊಲೀಸರು ಹಾಗೂ ಕ್ಷೇತ್ರದ ಆಡಳಿತ ಮಂಡಳಿಯ ಶಿಸ್ತುಬದ್ಧ ವ್ಯವಸ್ಥೆಯಿಂದಾಗಿ ಎಲ್ಲೂ ನೂಕುನುಗ್ಗಲು ಕಾಣದೇ ಭಕ್ತರು ಸರತಿ ಸಾಲಿನಲ್ಲಿ ನಿಂತು ಆರಾಮವಾಗಿ ಶಿವನ ಆತ್ಮಲಿಂಗದ ದರ್ಶನ ಪಡೆಯುವಂತಾಯಿತು. ಗೋಕರ್ಣದ ಸಮುದ್ರ ಹಾಗೂ ಕೋಟಿತೀರ್ಥ ಪುಷ್ಕರಣಿಯಲ್ಲಿ ಮಿಂದ ಬಳಿಕ ಕ್ಷೇತ್ರದಲ್ಲಿ ಮಹಾಬಲೇಶ್ವರನ ಸ್ಪರ್ಶ ದರ್ಶನ ಪಡೆದ ಭಕ್ತರು ತೀರ್ಥ ಪಡೆದುಕೊಂಡು ಪುನೀತರಾದರು.
ಕ್ಷೇತ್ರದ ಪೊಲೀಸ್ ಚೌಕಿಯಿಂದ ನಿಯಂತ್ರಿಸಲು ಕ್ಷೇತ್ರ ವ್ಯಾಪ್ತಿಯಲ್ಲಿ ಎಐ ಕ್ಯಾಮೆರಾ ಹಾಕಿದ್ದರಿಂದ ದೇವಳಕ್ಕೆ ವಿವಿಧ ದ್ವಾರಗಳಿಂದ ಪ್ರವೇಶಿಸುವ ಜನರ ಸಂಖ್ಯೆ, ಸುರಕ್ಷತೆ ವ್ಯವಸ್ಥೆಗಳನ್ನು ಖುದ್ದಾಗಿ ಪೊಲೀಸ್ ಅಧಿಕಾರಿಗಳೇ ಗಮನದಲ್ಲಿಟ್ಟು ದೇವರ ದರ್ಶನ ಸಾಂಗವಾಗಿ ನೆರವೇರುವಂತೆ ವ್ಯವಸ್ಥೆ ಕಲ್ಪಿಸಿದ್ದರು. ಮಧ್ಯಾಹ್ನದ ಹೊತ್ತಿನವರೆಗೆ ಗೋಕರ್ಣ ಕ್ಷೇತ್ರಕ್ಕೆ ಸುಮಾರು 50,000ಕ್ಕೂ ಮಿಕ್ಕಿ ಭಕ್ತರು ಭೇಟಿ ನೀಡಿದ್ದು, ರಾತ್ರಿಯವರೆಗೆ ಭಕ್ತರ ಸಂಖ್ಯೆ ಒಂದು ಲಕ್ಷ ದಾಟುವ ಸಾಧ್ಯತೆಯಿದೆ.
ಗೋಕರ್ಣದ ಪ್ರಮುಖ ಬೀಚ್‌ನಲ್ಲೂ ಮರಳಿನಿಂದ ಶಿವಲಿಂಗ ಮಾಡಿ ಭಕ್ತರು ಪೂಜೆ ಸಲ್ಲಿಸಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಕುಟುಂಬ ಸಮೇತರಾಗಿ ಬಂದಿದ್ದ ಭಕ್ತಾಧಿಗಳು ಸಮುದ್ರದಲ್ಲಿ ಸ್ನಾನ ಮಾಡಿ ಅಲ್ಲೇ ಮರಳಿನಲ್ಲಿ ಶಿವಲಿಂಗ ಮಾಡಿ ಅದಕ್ಕೆ ಹೂವು, ಬಿಲ್ವಪತ್ರೆ, ಲಿಂಬೆ ಹಣ್ಣು, ಸಿಹಿ ತಿಂಡಿಗಳನ್ನು ಇಟ್ಟು ಆರತಿ ಮಾಡಿ ಪೂಜೆ ಸಲ್ಲಿಸಿದ್ದಾರೆ. ಇತಿಹಾಸದ ಪ್ರಕಾರ, ಶಿವಭಕ್ತ ರಾವಣ ಆತ್ಮಲಿಂಗದೊಂದಿಗೆ ಗೋಕರ್ಣಕ್ಕೆ ಬಂದು ಸೂರ್ಯನಿಗೆ ಅರ್ಘ್ಯ ಸಮರ್ಪಿಸುತ್ತಿಸಿದ್ದ ವೇಳೆ ಆತನ ಕೈಯಲ್ಲಿದ್ದ ಆತ್ಮಲಿಂಗವನ್ನು ಗಣಪತಿ ಧರೆಯಲ್ಲಿರಿಸಿ ಇಲ್ಲೇ ಪ್ರತಿಷ್ಠಾಪನೆ ಮಾಡಿದ್ದರು. ಈ ಕಾರಣದಿಂದ ಜನರು ಇಲ್ಲಿ ಮರಳಿನ ಲಿಂಗ ರಚಿಸಿ ತಮ್ಮ ಕಷ್ಟ ನಿವಾರಿಸಲು ಹಾಗೂ ತಮ್ಮ ಮಕ್ಕಳಿಗೆ ಉತ್ತಮ ವರ ಅಥವಾ ವಧು ದೊರೆಯಲೆಂದು ಪ್ರಾರ್ಥಿಸಿ ಪೂಜೆ ಸಲ್ಲಿಸುತ್ತಾರೆ. ಮುಖ್ಯ ಬೀಚ್‌ನ ಉದ್ದಕ್ಕೂ ನೂರಾರು ಸಂಖ್ಯೆಯಲ್ಲಿ ಜನರು ಈ ವಿಶೇಷ ಪೂಜೆ ಸಲ್ಲಿಸುವುದು ಶಿವರಾತ್ರಿಯ ದಿನ ಕಾಣಬಹುದು.
ಒಟ್ಟಾರೆ, ಉತ್ತರಕನ್ನಡ ಜಿಲ್ಲೆಯಾದ್ಯಂತ ಸಂಭ್ರಮದ ಶಿವರಾತ್ರಿ ಉತ್ಸವ ಜರಗಿದ್ದು, ರಾಜ್ಯ ಹಾಗೂ ಹೊರ ರಾಜ್ಯದ ಭಕ್ತಾಧಿಗಳು ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ ಪರಶಿವನ ದರ್ಶನ ಪಡೆದು ತಮ್ಮ ಪಾಪ ಕರ್ಮಗಳನ್ನು ಕಳೆದುಕೊಂಡಿದ್ದಲ್ಲದೇ, ಶಿವಪೂಜೆ ಮಾಡಿ ಪುನೀತರಾಗಿದ್ದಾರೆ.
