ಅಂಕೋಲಾ: ಕ್ಷತ್ರಿಯ ಕೋಮಾರಪಂತ ಸಮಾಜದ ವಿಶಿಷ್ಟ ಆಡುಭಾಷೆಯನ್ನು ಅಣಕಿಸಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ಪೋಸ್ಟ್ ಮಾಡಿದ ಆರೋಪದಡಿ ಯುವತಿ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಶಿಕಾ ಕಾನಡೆ ಎಂಬ ಯುವತಿ ತನ್ನ ಇನ್‌ಸ್ಟಾಗ್ರಾಂ ಖಾತೆ “Myself_Nisshhh” ಮೂಲಕ ಕನ್ನಡ ಮತ್ತು ಕೋಮಾರಪಂತ ಸಮುದಾಯದ ಆಡುಭಾಷೆಯನ್ನು ಹೋಲಿಕೆ ಮಾಡಿ ವ್ಯಂಗ್ಯಾತ್ಮಕವಾಗಿ ರೀಲ್ಸ್‌ ಪ್ರಕಟಿಸಿದ್ದಾಳೆ ಎನ್ನಲಾಗಿದೆ. ಈ ಕುರಿತು ಸಮಾಜದ ಯುವಕರು ಆಕ್ಷೇಪ ವ್ಯಕ್ತಪಡಿಸಿದಾಗ, ಅವರಿಗೆ ಸಾಮಾಜಿಕ ಜಾಲತಾಣದಲ್ಲೇ ಕೆಟ್ಟ ಹುಳುಗಳು ಎಂದು ಅವಹೇಳನಕಾರಿ ಪದಗಳನ್ನು ಬಳಸಿ ಪ್ರತಿಕ್ರಿಯೆ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು

ಈ ಸಂಬಂಧ ಅಂಕೋಲಾದ ಶ್ರೀನಿವಾಸ ಲೋಕಪ್ಪ ನಾಯ್ಕ ಅವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರೀಲ್ಸ್‌ ಕೋಮಾರಪಂತ ಸಮಾಜದ ಸದಸ್ಯರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದು, ಸಮಾಜದ ಭಾಷೆ ಹಾಗೂ ಸಂಸ್ಕೃತಿಯನ್ನು ಅವಹೇಳನ ಮಾಡುವ ರೀತಿಯಲ್ಲಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಸಮಾಜದಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ನಿನ್ನೆ ಸೋಮವಾರ ಕೋಮಾರಪಂತ ಸಮಾಜದ ಮುಖಂಡರು ಹಾಗೂ ಯುವಕರು ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ಸಲ್ಲಿಸಿದ್ದರು.

ದೂರು ಸ್ವೀಕರಿಸಿದ ಪೊಲೀಸ್ ನಿರೀಕ್ಷಕ ಚಂದ್ರಶೇಖರ್ ಮಠಪತಿ, ಪ್ರಕರಣವನ್ನು ಕಾನೂನಿನ ಚೌಕಟ್ಟಿನೊಳಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ಸಮಾಜದ ಭಾಷೆ, ಸಂಸ್ಕೃತಿ ಮತ್ತು ಗೌರವವನ್ನು ಅವಹೇಳನ ಮಾಡುವಂತಹ ಕೃತ್ಯಗಳನ್ನು ತಡೆಯಲು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋಮಾರಪಂತ ಸಮಾಜದ ಮುಖಂಡರು ಆಗ್ರಹಿಸಿದ್ದರು. ಪ್ರಕರಣದ ಕುರಿತು ಅಂಕೋಲಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.