ಕಾರವಾರ: ಜಿಲ್ಲೆಯ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಉತ್ತೇಜನ ದೊರೆತಿದ್ದು, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್)ಗೆ 2026-27ನೇ ಶೈಕ್ಷಣಿಕ ವರ್ಷದಿಂದ ಒಟ್ಟು 200 ಎಂಬಿಬಿಎಸ್ ಸೀಟುಗಳಲ್ಲಿ ಪ್ರವೇಶಾತಿ ನಡೆಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC), ನವದೆಹಲಿ ಅನುಮೋದನೆ ನೀಡಿದೆ.

ಈವರೆಗೆ ಕ್ರಿಮ್ಸ್‌ನಲ್ಲಿ 150 ಎಂಬಿಬಿಎಸ್ ಸೀಟುಗಳಿಗೆ ಮಾತ್ರ ಪ್ರವೇಶಾತಿ ನಡೆಸಲಾಗುತ್ತಿತ್ತು. ಇದೀಗ ಹೆಚ್ಚುವರಿಯಾಗಿ 50 ಸೀಟುಗಳ ಹೆಚ್ಚಳಕ್ಕೆ ಅನುಮೋದನೆ ದೊರೆತಿರುವುದರಿಂದ, ಒಟ್ಟು 200 ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯುವ ಅವಕಾಶ ಲಭ್ಯವಾಗಲಿದೆ. ಈ ಬೆಳವಣಿಗೆ ಉತ್ತರ ಕನ್ನಡ ಜಿಲ್ಲೆಯ ವೈದ್ಯಕೀಯ ಶಿಕ್ಷಣದ ಬೆಳವಣಿಗೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಇದರೊಂದಿಗೆ 2026-27ನೇ ಶೈಕ್ಷಣಿಕ ವರ್ಷದಿಂದ ಬಿ.ಎಸ್‌ಸಿ ಅನಸ್ಥೀಷಿಯಾ ಮತ್ತು ಆಪರೇಷನ್ ಥಿಯೇಟರ್ ಟೆಕ್ನಾಲಜಿ ವಿಭಾಗದಲ್ಲಿ 30 ಸೀಟುಗಳು ಹಾಗೂ ಬಿ.ಎಸ್‌ಸಿ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ ವಿಭಾಗದಲ್ಲಿ 30 ಸೀಟುಗಳೊಂದಿಗೆ ಹೊಸ ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್‌ಗಳನ್ನೂ ಆರಂಭಿಸಲಾಗಿದೆ. ಈ ಕೋರ್ಸ್‌ಗಳಿಗೆ ಈಗಾಗಲೇ 7 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರು, ವೈದ್ಯಕೀಯ ಮತ್ತು ಅಲೈಡ್ ಹೆಲ್ತ್ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದ್ದಾರೆ.