ಕಾರವಾರ: ತಾಲ್ಲೂಕಿನ ಶಿರವಾಡದ ಖಾಸಗಿ ವಸತಿ ಕೊಠಡಿಯಲ್ಲಿ ವಾಸವಿದ್ದ ಜೋಯಿಡಾ ಮೂಲದ ಯುವಕನೊಬ್ಬ ಸಂಶಯಾಸ್ಪದವಾಗಿ ಮೃತಪಟ್ಟಿದ್ದು, ಈ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಜೋಯಿಡಾ ತಾಲೂಕಿನ ತೊಳಸವಾಡಾ–ಕುಂಬಾರವಾಡ ನಿವಾಸಿ ಅಶೋಕ ನಾರಾಯಣ ನಾಯ್ಕ (31) ಎಂದು ಗುರುತಿಸಲಾಗಿದೆ. ಅವರು ಕಳೆದ ನಾಲ್ಕು ತಿಂಗಳಿನಿಂದ ಕಾರವಾರದ ಶಿರವಾಡ ಸಮೀಪ ವೆಲ್ಡರ್ ಕೆಲಸ ಮಾಡುತ್ತಿದ್ದು, ಶಿರವಾಡದ ನಾರಗೇರಿ ಪ್ರದೇಶದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು.
ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಅಶೋಕ ಅವರಿಗೆ ಮದ್ಯಪಾನದ ಚಟವಿದ್ದು, ಟಿಬಿ ಹಾಗೂ ಕಾಮಾಲೆ (ಜಾಂಡಿಸ್) ಕಾಯಿಲೆಯಿಂದ ಬಳಲುತ್ತಿದ್ದರೂ ಮದ್ಯಪಾನ ಮುಂದುವರಿಸಿದ್ದರು ಎನ್ನಲಾಗಿದೆ. ಜುಲೈ 25ರಂದು ರಾತ್ರಿ ಸಹವಾಸಿಯಾಗಿದ್ದ ರೋಷನ್ ಸಂತಾನ ಪೆರೆರಾ ಅವರೊಂದಿಗೆ ಮದ್ಯ ಸೇವಿಸಿ ಊಟ ಮಾಡಿ ಮಲಗಿದ್ದರು. ಮಧ್ಯರಾತ್ರಿ ಅಶೋಕ ಅವರು ಹೊರಗೆ ಹೋಗಿ ಮರಳಿ ಬಂದು ಕೊಠಡಿಯನ್ನು ಒಳಗಿನಿಂದ ಲಾಕ್ ಮಾಡಿಕೊಂಡು ಮಲಗಿದ್ದರು ಎಂದು ತಿಳಿಸಲಾಗಿದೆ.
ಭಾನುವಾರ ಬೆಳಿಗ್ಗೆ ಸಂಗಡಿಗ ಎದ್ದು ನೋಡಿದಾಗ ಅಶೋಕ ಯಾವುದೇ ಪ್ರತಿಕ್ರಿಯೆ ನೀಡದಿದ್ದು, ಎಬ್ಬಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅವರ ಮುಖ ಹಾಗೂ ತಲೆಯ ಹಿಂಭಾಗದಲ್ಲಿ ಗಾಯಗಳಿರುವುದು ಕಂಡುಬಂದ ಹಿನ್ನೆಲೆಯಲ್ಲಿ ತಕ್ಷಣ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತರ ಸಂಬಂಧಿ ರಮೇಶ ವಿಠಲ ನಾಯ್ಕ ಅವರು ನೀಡಿದ ದೂರಿನಲ್ಲಿ, ಗಾಯಗಳ ಹಿನ್ನೆಲೆಯಲ್ಲಿ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವಿನ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
