ಕಾರವಾರ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಕಾರನ್ನು ಅಡ್ಡಗಟ್ಟಿ ಯುವಕನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ ಆರೋಪದಡಿ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಪ್ರಕರಣದಲ್ಲಿ ದರ್ಶನ ರಾಜೇಶ ಮಾಜಾಳಿಕರ, ಮೋಸಿನ್ ಖಾನ್, ಮಂಗಳೂರು ಮೂಲದ ಚೇತು ಸೇರಿದಂತೆ ಇನ್ನಿಬ್ಬರು ಅನಾಮಿಕರು ಸೇರಿದಂತೆ ಒಟ್ಟು ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರುದಾರರಾದ ಸದಾಶಿವಗಡದ ಚಿತ್ತಾಕುಲದ ಸಮೀರ್ ಕೆ. ಅತ್ತಾರ (26), ಏಪ್ರಿಲ್ 17, 2026ರಂದು ರಾತ್ರಿ ಸುಮಾರು 12 ಗಂಟೆಗೆ ಚಾಲಕನ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮಾಜಾಳಿ ಪೊಲೀಸ್ ಚೆಕ್‌ಪೋಸ್ಟ್ ಸಮೀಪ ಎರಡು ಕಾರುಗಳಲ್ಲಿ ಬಂದ ಆರೋಪಿಗಳು ತನ್ನ ವಾಹನವನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ‘ಇಂದು ನಿನ್ನನ್ನು ಕೊಲ್ಲುತ್ತೇವೆ, ಜೀವಂತ ಬಿಡುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಭಯಗೊಂಡು ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ, GA-06 95802 ನೋಂದಣಿ ಸಂಖ್ಯೆಯ ಸಫಾರಿ ಹಾಗೂ KA-30-M-8223 ನೋಂದಣಿ ಸಂಖ್ಯೆಯ ಬೆಳ್ಳಿ ಬಣ್ಣದ ಸ್ವಿಫ್ಟ್ ಕಾರುಗಳನ್ನು ಬಳಸಿ ಮತ್ತೆ ತನ್ನ ಕಾರನ್ನು ಅಡ್ಡಗಟ್ಟಿದ ಆರೋಪಿಗಳು, ತಮ್ಮೊಂದಿಗೆ ತಂದಿದ್ದ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಆರೋಪಿಗಳಲ್ಲಿ ದರ್ಶನ ಮಾಜಾಳಿಕರ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಮೂಗಿನ ಭಾಗಕ್ಕೆ ಗಂಭೀರ ಗಾಯಪಡಿಸಿದ್ದಾನೆ ಎಂದು ಸಮೀರ್ ದೂರಿನಲ್ಲಿ ಆರೋಪಿಸಿದ್ದಾರೆ.

ಘಟನೆಯ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.