ಅಂಕೋಲಾ: ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತು ಓಸಿ ಮಟಕಾ ನಡೆಸಿ ಸಾರ್ವಜನಿಕರನ್ನು ಹಣ ಪಣಕ್ಕಿಟ್ಟು ಜೂಜಾಟ ಆಡಲು ಪ್ರಚೋದನೆ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇಲ್ಲಿನ ನದಿಭಾಗ ಖಾರ್ವಿವಾಡದ ಸಂತೋಷ ವೆಂಕಟೇಶ ಖಾರ್ವಿ (28) ಎಂಬಾತನೇ ಅಕ್ರಮ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿ. ಜುಲೈ 16ರಂದು ರಾತ್ರಿ ಸುಮಾರು 8.20 ಗಂಟೆಗೆ, ಅಂಕೋಲಾದ ಹುಲಿದೇವರವಾಡಾ ಬಳಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಎದುರಿನ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತು, ದಾರಿಹೋಕರನ್ನು ಕರೆಯುತ್ತಾ ತಮ್ಮ ಅದೃಷ್ಟ ಸಂಖ್ಯೆಗಳ ಮೇಲೆ ಹಣ ಪಣಕ್ಕಿಡುವಂತೆ ಪ್ರೇರೇಪಿಸುತ್ತಿದ್ದ. ಒಂದು ರೂಪಾಯಿಗೆ 80 ರೂಪಾಯಿ ನೀಡುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಪಡೆದು ಚೀಟಿಯಲ್ಲಿ ಸಂಖ್ಯೆಗಳು ದಾಖಲಿಸಿ ಓಸಿ ಮಟಕಾ ಜೂಜಾಟ ನಡೆಸುತ್ತಿದ್ದ ವೇಳೆ ಪೊಲೀಸ್ ಉಪನಿರೀಕ್ಷಕ ಗುರುನಾಥ ಹಾದಿಮನಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಆರೋಪಿಯಿಂದ ₹570 ನಗದು ಹಾಗೂ ಓಸಿ ಮಟಕಾ ಜೂಜಾಟಕ್ಕೆ ಬಳಸುತ್ತಿದ್ದ ವಿವಿಧ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.