ಗದಗ: ರಾಜ್ಯ ಸರ್ಕಾರ ಡ್ರಗ್ಸ್ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

 ಶುಕ್ರವಾರ ಗದಗ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಲೆ-ಕಾಲೇಜುಗಳಿಂದ ಹಿಡಿದು ಜೈಲುಗಳವರೆಗೆ ಡ್ರಗ್ಸ್ ಮಾರಾಟದ ಜಾಲ ವ್ಯಾಪಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು. ‘ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳ ಪೊಲೀಸರು ಕರ್ನಾಟಕಕ್ಕೆ ಬಂದು ಡ್ರಗ್ಸ್ ಜಾಲವನ್ನು ಪತ್ತೆಹಚ್ಚುತ್ತಿದ್ದಾರೆ. ಆದರೆ ರಾಜ್ಯದ ಪೊಲೀಸರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ವಿಫಲರಾಗಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿಯವರೇ ಕರ್ನಾಟಕವು ಡ್ರಗ್ಸ್ ತಯಾರಿಕೆಯ ಕೇಂದ್ರವಾಗುತ್ತಿದೆ ಎಂದು ಹೇಳಿಕೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಅವರು ಆರೋಪಿಸಿದರು.

ಗೃಹ ಸಚಿವರ ಕ್ಷೇತ್ರದಲ್ಲಿರುವ ಜೈಲಿನಿಂದ ಖೈದಿಗಳು ಪರಾರಿಯಾಗಿರುವ ಘಟನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಇದು ಅತ್ಯಂತ ಗಂಭೀರ ಪ್ರಕರಣವಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ, ಸತ್ಯಾಸತ್ಯತೆ ಹೊರತರುವುದು ಅಗತ್ಯವಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.