ಶಿರಸಿ: ಸಾಮಾನ್ಯವಾಗಿ ವೈನ್‌ಶಾಪ್‌ಗೆ ಹೋದರೆ ಗ್ರಾಹಕರಿಗೆ ಸಿಗುವುದು ಕ್ವಾಟರ್ ಅಥವಾ ಬಿಯರ್. ಆದರೆ ಶಿರಸಿಯ ಕ್ವಾಲಿಟಿ ವೈನ್‌ಶಾಪ್‌ನಲ್ಲಿ ಒಬ್ಬ ಗ್ರಾಹಕನಿಗೆ ಕ್ವಾಟರ್ ಜೊತೆಗೆ ‘ದೊಣ್ಣೆ ಡೋಸ್’ ಕೂಡ ಸಿಕ್ಕಿದೆಯಂತೆ!

ಭಗತ್ ಸಿಂಗ್‌ ನಗರದ ಶ್ರೀನಿವಾಸ ಅರವಿಂದ ಆಚಾರಿ (45), ಪ್ರತಿದಿನ ಕರಿಗುಂಡಿ ರಸ್ತೆಯಲ್ಲಿರುವ ಕ್ವಾಲಿಟಿ ವೈನ್ ಶಾಪ್ ಹೋಗುವುದು ಅವರ ವಾಡಿಕೆ. ಆದರೆ ಪ್ರತಿ ಸಲವೂ ಹೋದಾಗಲೂ ವೈನ್‌ ಶಾಪ್‌ನ ಮ್ಯಾನೇಜರ್ ಸಂಕೇತ್ ಪೂಜಾರಿ ಎಂಬಾತ ಶ್ರೀನಿವಾಸ ಆಚಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವುದನ್ನು ರೂಢಿಸಿಕೊಂಡಿದ್ದ ಎನ್ನಲಾಗಿದೆ.

ಎಂದಿನಂತೆ ಸೋಮವಾರ ಜುಲೈ 13 ರಂದು ರಾತ್ರಿ 7.30 ರ ಸುಮಾರಿಗೆ ಶ್ರೀನಿವಾಸ ಆಚಾರಿ, ಮಧ್ಯಪಾನ ಮಾಡಲು ಕ್ವಾಲಿಟಿ ವೈನ್ ಶಾಪಿಗೆ ಹೋಗಿ ಕೌಂಟರ್‌ನಲ್ಲಿ ಹಣ ನೀಡಿ, ಒಂದು ಕ್ವಾಟರ್ ಮದ್ಯ ಪಡೆದುಕೊಂಡು ಅಲ್ಲಿಯೇ ಅರ್ಧ ಕುಡಿದಿದ್ದಾನೆ. ನಂತರ ವೈನ್ ಶಾಪ್ ದಿಂದ ಹೊರಗೆ ಬಂದು ಅಲ್ಲಿದ್ದ ಒಬ್ಬ ವ್ಯಕ್ತಿಯ ಹತ್ತಿರ ಮಾತನಾಡುತ್ತಾ ನಿಂತುಕೊಂಡಿದ್ದಾನೆ. ಆಗ ಕೌಂಟರ್ ಒಳಗಿದ್ದ ವೈನ್‌ ಶಾಪ್‌ ಮ್ಯಾನೇಜರ್‌ ಸಂಕೇತ ಪೂಜಾರಿ ಹೊರಬಂದು ಏಕಾಏಕಿ ಆಚಾರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಒಂದು ಕಟ್ಟಿಗೆ ದೊಣ್ಣೆಯಿಂದ ಜೋರಾಗಿ ಹೊಡೆದಿದ್ದಾನೆ ಎನ್ನಲಾಗಿದೆ. ಮ್ಯಾನೇಜರ್‌ನ ಹೊಡೆತದಿಂದ ಕಂಗಾಲಾಗಿ ತನಗೆ ‘ಎಂತಕೆ ಹೊಡೆದೆ’ ಎಂದು ಹೊಡೆತ ತಿಂದ ಆಚಾರಿ ಕೇಳಿದಾಗ, ಯಾಕೆಂದು ಹೇಳದೇ ಆಚಾರಿಗೆ ಇನ್ನೊಂದೆರಡು ಹೊಡೆದು ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ದೊಣ್ಣೆ ಏಟು ತಿಂದ ಆಚಾರಿ ಶಿರಸಿ ಹೊಸ ಮಾರುಕಟ್ಟೆ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ.

ಈ ಘಟನೆಯಿಂದ ದಿಗ್ಬಾಂತ್ರರಾಗಿರುವ ಕೆಲ ಮದ್ಯ ಪ್ರೇಮಿಗಳು, ಇನ್ನು ಈ ವೈನ್‌ ಶಾಪ್‌ಗೆ ಹೋಗುವಾಗ ಹೆಲ್ಮೇಟ್‌ ಹಾಕಿಕೊಂಡು ಹೋಗುವುದಾ ಎಂಬ ಚಿಂತೆಯಲ್ಲಿರುವುದಂತೂ ಸುಳ್ಳಲ್ಲ ಅಂತೆ!