ಕಾರವಾರ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಜಲಸಾಹಸ (Water Sports) ಚಟುವಟಿಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಹತ್ವದ ಕ್ರಮ ಕೈಗೊಂಡಿದೆ. ಜಿಲ್ಲೆಯ ಅಂಕೋಲಾದ ನದಿಭಾಗ, ಕುಮಟಾದ ಕಾಗಾಲ, ಹೆಡ್‌ಬಂದರು, ಧಾರೇಶ್ವರ, ಹೊನ್ನಾವರದ ಅಪ್ಸರಕೊಂಡ, ಕಾಸರಕೋಡು ಕಡಲತೀರಗಳು ಹಾಗೂ ಹೊನ್ನಾವರದ ಅರೆಸಾಮಿ ಕೆರೆಯಲ್ಲಿ ಜಲಸಾಹಸ ಕ್ರೀಡೆಗಳನ್ನು ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಅವರು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನರಲ್ ತಿಮ್ಮಯ್ಯ ಜಲಸಾಹಸ ಅಕಾಡೆಮಿ (JETNA) ಸರ್ವೇ ವರದಿಯಲ್ಲಿ ಅನುಮೋದನೆ ಪಡೆದಿರುವ ಪ್ರದೇಶಗಳಲ್ಲಿ ಮಾತ್ರ ಗರಿಷ್ಠ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಸ್ಥಳದ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾದ ಜಲಸಾಹಸ ಕ್ರೀಡೆಗಳನ್ನು ಆಯೋಜಿಸುವಂತೆ ಸೂಚಿಸಿದರು. ಹೊನ್ನಾವರದ ಕಾಸರಕೋಡು ಕಡಲತೀರದಲ್ಲಿ ಪರಿಸರ ಸ್ನೇಹಿ ಹಾಗೂ ಶಬ್ದಮಾಲಿನ್ಯ ರಹಿತ ಇವಿ ಮತ್ತು ಸೋಲಾರ್ ಆಧಾರಿತ ಜಲಸಾಹಸ ಚಟುವಟಿಕೆಗಳನ್ನು ಆರಂಭಿಸಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಅಲ್ಲದೆ, ಪ್ರವಾಸಿಗರ ಸುರಕ್ಷತೆಗಾಗಿ ಸುಸಜ್ಜಿತ ವಾಚ್ ಟವರ್ ನಿರ್ಮಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು. ಕಾಸರಕೋಡು ಕಡಲತೀರದ ಪಕ್ಕದಲ್ಲಿರುವ ಅರಣ್ಯ ಇಲಾಖೆಯ ಇಕೋ ಪಾರ್ಕ್‌ನ್ನು ನಿರ್ವಹಣೆ ಹಾಗೂ ಆದಾಯ ಹಂಚಿಕೆ ಆಧಾರದ ಮೇಲೆ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಕುರಿತು ಅರಣ್ಯ ಇಲಾಖೆಯೊಂದಿಗೆ ಪ್ರತ್ಯೇಕ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಇದೇ ವೇಳೆ, ಕಾರವಾರದ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿರುವ ಮಕ್ಕಳ ಉದ್ಯಾನವನವನ್ನು ಇನ್ನಷ್ಟು ಆಕರ್ಷಕವಾಗಿ ಅಭಿವೃದ್ಧಿಪಡಿಸಿ, ಕುಟುಂಬ ಸಮೇತ ಆಗಮಿಸುವ ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಳಗೌರಿ ಭಟ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.