ಕಾರವಾರ: ಅಕ್ರಮ ಗೋವಾ ಮದ್ಯ ಸಾಗಾಟ ಪ್ರಕರಣದಲ್ಲಿ ಸಿಲುಕಿದ್ದ ಕಾರವಾರ ತಾಲೂಕಿನ ಕದ್ರಾ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಸಂತೋಷ್ ಲಮಾಣಿ ಅವರನ್ನು ಸೇವೆಯಿಂದ ವಜಾಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ದೀಪನ್ ಎಂ.ಎನ್. ಆದೇಶ ಹೊರಡಿಸಿದ್ದಾರೆ.

ಸುಮಾರು ಎರಡು ವರ್ಷಗಳ ಹಿಂದೆ ಗೋಕರ್ಣದಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಾಟ ನಡೆಸುತ್ತಿದ್ದ ವೇಳೆ ಸಂತೋಷ್ ಲಮಾಣಿ ಅವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಬಂಧಿತರಾಗಿದ್ದರು. ಈ ಘಟನೆ ಬಳಿಕ ಅವರನ್ನು ಪೊಲೀಸ್ ಇಲಾಖೆಯಿಂದ ಅಮಾನತುಗೊಳಿಸಲಾಗಿತ್ತು.
ಪ್ರಕರಣದ ಕುರಿತು ಇಲಾಖಾ ತನಿಖೆ ನಡೆಸಲಾಗಿದ್ದು, ತನಿಖೆಯಲ್ಲಿ ಪೇದೆಯ ವಿರುದ್ಧದ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ಇಲಾಖಾ ಶಿಸ್ತು ಕ್ರಮವಾಗಿ ಅವರನ್ನು ಪೊಲೀಸ್ ಸೇವೆಯಿಂದ ವಜಾಗೊಳಿಸಲಾಗಿದೆ.
ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಈ ಕ್ರಮದ ಮೂಲಕ ಇಲಾಖೆ ನೀಡಿದೆ. ಎಸ್ಪಿ ದೀಪನ್ ಎಂ.ಎನ್. ಅವರ ಆದೇಶದಂತೆ ಸಂತೋಷ್ ಲಮಾಣಿ ಅವರನ್ನು ಅಧಿಕೃತವಾಗಿ ಸೇವೆಯಿಂದ ವಜಾಗೊಳಿಸಲಾಗಿದೆ.
