Karwar| ದಾಂಡೇಲಿಯಲ್ಲಿ ಯುವತಿಗೆ ಅಸಭ್ಯ ಸಂದೇಶ ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ದಾಂಡೇಲಿ ನಗರ ಪೋಲಿಸ್ ಠಾಣೆಯ ಪೋಲಿಸ್ ಕಾನ್ಸಸ್ಟೇಬಲ್ ಮಹಾಂತೇಶ ಎಂಬಾತನನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಯುವತಿ ದಾಂಡೇಲಿ ನಗರಠಾಣೆಯ ಈರ್ವರು ಪೊಲೀಸ್ ಕಾನ್ಸಸ್ಟೇಬಲ್ ಗಳ ವಿರುದ್ಧ ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರು ಆಧರಿಸಿ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣದ ತನಿಖೆಗೆ ಕಾರವಾರದಿಂದ ಹಿರಿಯ ಪೊಲೀಸ್ ಅಧಿಕಾರಿಗಳ ತಂಡವು ಶುಕ್ರವಾರ ದಾಂಡೇಲಿಯಲ್ಲಿ ಸ್ಥಳ ಪರಿಶೀಲನೆ ನಡೆಸಿ, ಪಂಚನಾಮೆ ಕಾರ್ಯವನ್ನು ನಡೆಸಿತು. ಅಲ್ಲದೆ ಪ್ರಕರಣದ ವಿವಿಧ ಆಯಾಮಗಳ ಕುರಿತು ಮಾಹಿತಿ ಸಂಗ್ರಹಿಸಿತು.

ಘಟನೆಗೆ ಸಂಬಂಧಪಟ್ಟವರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಇದೇ ಪ್ರಕರಣದಲ್ಲಿ ಮತ್ತೋರ್ವ ಪೋಲಿಸ್ ಕಾನಸ್ಟೇಬಲ್ ಇಮ್ರಾನ್ ಪಾತ್ರದ ಬಗ್ಗೆಯೂ ತನಿಖೆ ನಡೆದಿದೆ. ಇಮ್ರಾನ್ ಧ್ವನಿ ಪರೀಕ್ಷೆಗೆ ಎಫ್ ಎಸ್ಎಲ್ ಗೆ ಕಳುಹಿಸುವ ಸಾಧ್ಯತೆ ಇದೆ.‌ ಅಧಿಕಾರಿಗಳು ಘಟನೆಯ ಸಾಕ್ಷಾಧಾರಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ತನಿಖೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದ್ದು, ತನಿಖೆ ಪೂರ್ಣಗೊಂಡ ಬಳಿಕ ಮತ್ತಷ್ಟು ಮಾಹಿತಿ ಹೊರಬರಲಿದೆ. ಪೊಲೀಸ್ ವರಿಷ್ಠಾಧಿಕಾರಿಗಳ ಕಟ್ಟು ನಿಟ್ಟಿನ ನಡೆ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.‌