Karwar| ಜಿಲ್ಲೆಯ ಗೋಕರ್ಣ ಮತ್ತು ಮುಂಡಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ಪೊಲೀಸರು ಓಸಿ (ಮಟಕಾ) ಜೂಜಾಟಕ್ಕೆ ಬಳಸುತ್ತಿದ್ದ ನಗದು, ಸಾಮಗ್ರಿಗಳನ್ನು ವಶಪಡಿಸಿಕೊಂಡು, ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ತದಡಿ ಬಂದರು ಸಾರ್ವಜನಿಕ ಸ್ಥಳದಲ್ಲಿ ಮಂಜುನಾಥ ಮಾದೇವ ನಾಯ್ಕ (38) ಎಂಬಾತ ಅಂಕಿ ಸಂಖ್ಯೆಗಳ ಮೇಲೆ ಹಣದ ಕಟ್ಟಿಸಿಕೊಂಡು ಓಸಿ ಚೀಟಿ ಬರೆಯುತ್ತಿದ್ದ ವೇಳೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ಆರೋಪಿಯಿಂದ ಅಂಕಿ ಸಂಖ್ಯೆ ಬರೆದ ಹಾಳೆ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ, ಮುಂಡಗೋಡ ತಾಲೂಕಿನ ಓಣಿಕೇರಿ ಗ್ರಾಮದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಸುಂಕಪ್ಪ ದೇವೆಂದ್ರಪ್ಪ ಕೊರವರ (46) ಎಂಬಾತ ಸಾರ್ವಜನಿಕರಿಗೆ ಓಸಿ ಜೂಜಾಟದಲ್ಲಿ ಹಣ ಪಂತ ಕಟ್ಟಿದರೆ ಒಂದು ರೂಪಾಯಿಗೆ ₹80 ನೀಡುವುದಾಗಿ ಆಮಿಷವೊಡ್ಡಿ ಹಣ ಪಡೆದು ಚೀಟಿ ಬರೆಯುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದರು. ಆರೋಪಿಯಿಂದ ನಗದು, ಓಸಿ ಅಂಕೆ ಸಂಖ್ಯೆ ಬರೆದ ಚೀಟಿ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಪೊಲೀಸರು ಸಾರ್ವಜನಿಕರಿಗೆ ಅಕ್ರಮ ಜೂಜಾಟದಲ್ಲಿ ತೊಡಗದಂತೆ ಹಾಗೂ ಇಂತಹ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.