Karwar| ಅಂಕೋಲಾದಲ್ಲಿ ಇತ್ತೀಚೆಗೆ ನಡೆದ ಉದ್ಯಮಿ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಗೋಪಾಲಕೃಷ್ಣ ರಾಮಚಂದ್ರ ನಾಯಕ ಮೇಲಿನ ಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ನೀಡಿದವರಿಗೆ ಪೊಲೀಸ್ ಇಲಾಖೆ ಬಹುಮಾನ ಘೋಷಿಸಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಸೌತ್ ಗೋವಾದ ಮೊಹಮ್ಮದ್ ಇಮ್ರಾನ ಸಲ್ಮಾನಿ (46) ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರಿನ ಅಬ್ದುಲ್ ಗನಿ (31) ಈವರೆಗೆ ಪೊಲೀಸರಿಗೆ ಸಿಕ್ಕದೇ ತಲೆಮರೆಸಿಕೊಂಡಿದ್ದಾರೆ. ಪ್ರಕರಣದ ತನಿಖೆಗೆ ಈ ಇಬ್ಬರ ವಿಚಾರಣೆ ಅಗತ್ಯವಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ಇದ್ದಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರ ಮೊಬೈಲ್ ಸಂಖ್ಯೆ 9480805258ಕ್ಕೆ ಮಾಹಿತಿ ನೀಡುವಂತೆ ಕೋರಲಾಗಿದೆ. ಮಾಹಿತಿ ನೀಡಿದವರಿಗೆ ತಲಾ ₹25 ಸಾವಿರ ಬಹುಮಾನ ನೀಡಲಾಗುವುದು. ಜೊತೆಗೆ ಮಾಹಿತಿದಾರರ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದು ಪ್ರಕರಣದ ತನಿಖಾಧಿಕಾರಿ ಹಾಗೂ ಯಲ್ಲಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.