ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ರಾಮ ಮಂದಿರದಲ್ಲಿ ವಿಐಪಿ ದರ್ಶನ ಪಾಸ್‌ ನೀಡಲು ಬಳಸಲಾಗುತ್ತಿದ್ದ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಟ್ರಸ್ಟಿ ಅನಿಲ್ ಮಿಶ್ರಾ ಹಾಗೂ ವಿಶೇಷ ಆಹ್ವಾನಿತ ಸದಸ್ಯ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಮೂಲದ ಗೋಪಾಲ್ ರಾವ್ @ ಗೋಪಾಲ ನಾಗರಕಟ್ಟೆ ಅವರ ಡಿಜಿಟಲ್ ಐಡಿಗಳನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ.

ಹೊಸ ಪ್ರಧಾನ ಕಾರ್ಯದರ್ಶಿ (ಕಾರ್ಯನಿರ್ವಹಣಾ) ಕೃಷ್ಣ ಮೋಹನ್ ಅವರ ನೇತೃತ್ವದಲ್ಲಿ ವಿಐಪಿ ದರ್ಶನ ಪಾಸ್‌ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಹಾಗೂ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಡಿಜಿಟಲ್ ಐಡಿಗಳನ್ನು ನಿಷ್ಕ್ರಿಯಗೊಳಿಸಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಅವರ ಶಿಫಾರಸಿನ ಮೇರೆಗೆ ಅಥವಾ ಅವರ ಡಿಜಿಟಲ್ ಖಾತೆಗಳ ಮೂಲಕ ‘ಸುಗಮ ದರ್ಶನ’ ಹಾಗೂ ‘ವಿಶಿಷ್ಟ ದರ್ಶನ’ ಪಾಸ್‌ಗಳನ್ನು ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಈ ಬೆಳವಣಿಗೆ ರಾಮ ಮಂದಿರದ ಹಣಕಾಸು ಅಕ್ರಮಗಳ ಕುರಿತು ವಿಶೇಷ ತನಿಖಾ ತಂಡ (SIT) ನಡೆಸುತ್ತಿರುವ ತನಿಖೆಯ ನಡುವೆಯೇ ನಡೆದಿದೆ.

ತನಿಖೆಯಲ್ಲಿ ಟ್ರಸ್ಟಿಗಳು ಹಾಗೂ ಹಿರಿಯ ಪದಾಧಿಕಾರಿಗಳಿಗೆ ನೀಡಲಾಗಿದ್ದ ಡಿಜಿಟಲ್ ಐಡಿಗಳನ್ನು ದುರುಪಯೋಗಪಡಿಸಿಕೊಂಡು ಅನಧಿಕೃತವಾಗಿ ವಿಐಪಿ ದರ್ಶನ ಪಾಸ್‌ಗಳನ್ನು ನೀಡಲಾಗಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ಹೇಳಲಾಗಿದೆ.

ಬಂಧಿತನಾಗಿರುವ ಟಿನ್ನು ಯಾದವ್ ಎಂಬ ಆರೋಪಿ ಈ ವ್ಯವಸ್ಥೆಯ ಲೋಪವನ್ನು ಬಳಸಿಕೊಂಡು ನೂರಾರು ಅನಧಿಕೃತ ವಿಐಪಿ ದರ್ಶನ ಪಾಸ್‌ಗಳನ್ನು ಸೃಷ್ಟಿಸಿದ್ದಾನೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ಚಂಪತ್ ರೈ ಹಾಗೂ ಅನಿಲ್ ಮಿಶ್ರಾ ಅವರ ಕೆಲವು ಆಪ್ತರು ವಿಐಪಿ ಪಾಸ್‌ ನೀಡುವ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಅಕ್ರಮವಾಗಿ ವಸೂಲಿ ಮಾಡಿದ ಆರೋಪದ ತನಿಖೆಯ ವ್ಯಾಪ್ತಿಗೆ ಬಂದಿದ್ದಾರೆ ಎನ್ನಲಾಗಿದೆ.

ಕಳೆದ ಜೂನ್ ಮೊದಲ ವಾರದಲ್ಲಿ ರಾಮ ಮಂದಿರದ ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿತ್ತು. ಟ್ರಸ್ಟ್‌ನ ಶಿಫಾರಸಿನ ಮೇರೆಗೆ ಉತ್ತರ ಪ್ರದೇಶ ಸರ್ಕಾರ ಎಸ್‌ಐಟಿ ರಚಿಸಿ ತನಿಖೆ ಆರಂಭಿಸಿತ್ತು. ತನಿಖೆಯಲ್ಲಿ ಪ್ರಾಥಮಿಕ ಹಂತದಲ್ಲೇ ಹಣ ದುರ್ಬಳಕೆಯ ಸುಳಿವು ದೊರೆತ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದ್ದು, ದೇಣಿಗೆ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದ ಎಂಟು ಮಂದಿಯನ್ನು ಬಂಧಿಸಲಾಗಿದೆ.

ಈ ಬೆಳವಣಿಗೆಗಳ ನಡುವೆಯೇ ಚಂಪತ್ ರೈ ಅವರು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಜುಲೈ 6ರಂದು ಅದನ್ನು ಅಂಗೀಕರಿಸಲಾಗಿದೆ. ಅವರ ಸ್ಥಾನಕ್ಕೆ ಮಾಜಿ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಕೃಷ್ಣ ಮೋಹನ್ ನೇಮಕಗೊಂಡಿದ್ದಾರೆ. ಟ್ರಸ್ಟಿ ಅನಿಲ್ ಮಿಶ್ರಾ ಕೂಡ ರಾಜೀನಾಮೆ ನೀಡಿದ್ದು, ಗೋಪಾಲ್ ರಾವ್ ಅವರನ್ನು ವಿಶೇಷ ಆಹ್ವಾನಿತ ಸದಸ್ಯರ ಜವಾಬ್ದಾರಿಯಿಂದ ಬಿಡುಗಡೆ ಮಾಡಲಾಗಿದೆ.

ಪ್ರಸ್ತುತ ದಾಖಲಾದ ಎಫ್‌ಐಆರ್‌ನಲ್ಲಿ ಚಂಪತ್ ರೈ, ಅನಿಲ್ ಮಿಶ್ರಾ ಹಾಗೂ ಗೋಪಾಲ್ ರಾವ್ ಅವರ ಹೆಸರು ಆರೋಪಿಗಳ ಪಟ್ಟಿಯಲ್ಲಿ ಇಲ್ಲ. ಆದರೆ, ರಾಮ ಮಂದಿರ ಆಡಳಿತದಲ್ಲಿ ಹಿರಿಯ ಜವಾಬ್ದಾರಿ ನಿರ್ವಹಿಸಿದ್ದ ಹಿನ್ನೆಲೆಯಲ್ಲಿ ಅವರಿಂದಲೂ ಉತ್ತರದಾಯಿತ್ವ ನಿಗದಿಪಡಿಸಬೇಕು ಎಂದು ಕೆಲವು ವಿರೋಧ ಪಕ್ಷಗಳು ಹಾಗೂ ಸಮಾಜದ ವಿವಿಧ ವಲಯಗಳು ಆಗ್ರಹಿಸಿವೆ.