Karwar| ಗೃಹಬಳಕೆಗೆ ನೀಡಲಾಗುವ ಎಲ್‌ಪಿಜಿ ಸಿಲಿಂಡರ್‌ಗಳನ್ನು ಹೋಟೆಲ್, ಬಾರ್, ರೆಸ್ಟೋರೆಂಟ್, ರೆಸಾರ್ಟ್, ಬೇಕರಿ ಸೇರಿದಂತೆ ಯಾವುದೇ ವಾಣಿಜ್ಯ ಉದ್ದೇಶಕ್ಕೆ ಬಳಸಬಾರದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಎಚ್ಚರಿಕೆ ನೀಡಿದೆ.

ವಾಣಿಜ್ಯ ಉದ್ದೇಶಕ್ಕಾಗಿ ಎಲ್‌ಪಿಜಿ ಸಿಲಿಂಡರ್ ಬಳಸುವ ಎಲ್ಲ ಸಂಸ್ಥೆಗಳು ಅಧಿಕೃತ ಏಜೆನ್ಸಿಗಳಿಂದ ವಾಣಿಜ್ಯ ಸಿಲಿಂಡರ್‌ಗಳನ್ನು ಖರೀದಿಸಿ, ಅದರ ಬಿಲ್‌ಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಇಲಾಖೆ ತಿಳಿಸಿದೆ.

ಇಲಾಖೆಯ ಅಧಿಕಾರಿಗಳು ನಡೆಸುವ ತಪಾಸಣೆಯ ವೇಳೆ ಗೃಹಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ಬಳಸಿರುವುದು ಅಥವಾ ವಾಣಿಜ್ಯ ಸಿಲಿಂಡರ್‌ಗೆ ಸಂಬಂಧಿಸಿದ ಅಧಿಕೃತ ಬಿಲ್ ಇಲ್ಲದಿರುವುದು ಕಂಡುಬಂದರೆ, ಎಲ್‌ಪಿಜಿ ಸರಬರಾಜು ಮತ್ತು ವಿತರಣೆ (ನಿಯಂತ್ರಣ) ಆದೇಶ–2000ರ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉಪನಿರ್ದೇಶಕರು ತಿಳಿಸಿದ್ದಾರೆ.

ಇದಲ್ಲದೆ, ನಿಯಮ ಉಲ್ಲಂಘಿಸಿದವರ ವಿರುದ್ಧ ವಾಣಿಜ್ಯ ತೆರಿಗೆ ಇಲಾಖೆ, ಕಾರ್ಮಿಕ ಇಲಾಖೆ, ಆಹಾರ ಸುರಕ್ಷತಾ ಇಲಾಖೆ, ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆದು, ಅವರಿಗೆ ನೀಡಿರುವ ವ್ಯಾಪಾರ ಪರವಾನಗಿಗಳ ನವೀಕರಣ ಮಾಡದಂತೆ ಶಿಫಾರಸು ಮಾಡಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ತಾಲೂಕಿನ ತಹಶೀಲ್ದಾರ್ ಕಚೇರಿಯ ಆಹಾರ ಶಿರಸ್ತೇದಾರ ಅಥವಾ ಆಹಾರ ನಿರೀಕ್ಷಕರನ್ನು ಸಂಪರ್ಕಿಸಬಹುದು. ಅಲ್ಲದೆ, ಉತ್ತರ ಕನ್ನಡ ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.