ಕಾರವಾರ: ರಾಷ್ಟ್ರೀಯ ಹೆದ್ದಾರಿ-66 ರ ಬಿಣಗಾ ಸಮೀಪ ಐಆರ್‌ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿಯಿಂದ ಕಾರು ಪಲ್ಟಿಯಾಗಿ, ಕಾರಿನಲ್ಲಿದ್ದ ವೈದ್ಯರು ಸೇರಿದಂತೆ ಇಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಬಿಣಗಾದ ಐಟಿಐ ಕಾಲೇಜು ಎದುರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಪೂರ್ಣವಾಗಿರುವ ಹಿನ್ನೆಲೆಯಲ್ಲಿ ಆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು. ರಸ್ತೆ ಬಂದ್ ಮಾಡಲು ಜಲ್ಲಿ ಮತ್ತು ಕಲ್ಲುಗಳನ್ನು ಹಾಕಲಾಗಿದ್ದರೂ, ಸೂಕ್ತ ಎಚ್ಚರಿಕೆ ಫಲಕಗಳು, ಸುರಕ್ಷತಾ ಬ್ಯಾರಿಕೇಡ್‌ಗಳು ಹಾಗೂ ರಸ್ತೆ ದೀಪಗಳ ವ್ಯವಸ್ಥೆ ಮಾಡದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕಾರವಾರದಿಂದ ದಾವಣಗೆರೆ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯರು ಕತ್ತಲಿನ ಕಾರಣದಿಂದ ರಸ್ತೆಗೆ ಹಾಕಲಾಗಿದ್ದ ಕಲ್ಲುಗಳನ್ನು ಗಮನಿಸದೆ ಅದರ ಮೇಲೆ ಕಾರು ಚಲಾಯಿಸಿದ್ದು, ಪರಿಣಾಮ ವಾಹನದ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯ ಸಂಭವಿಸಿಲ್ಲ. ಕಾರಿನಲ್ಲಿದ್ದ ಇಬ್ಬರೂ ಸುರಕ್ಷಿತವಾಗಿ ಪಾರಾಗಿದ್ದಾರೆ.
ಘಟನೆಯ ಬಳಿಕ ಸಾರ್ವಜನಿಕರು ಹಾಗೂ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕಾಮಗಾರಿ ನಿರ್ವಹಿಸುತ್ತಿರುವ ಐಆರ್‌ಬಿ ಕಂಪನಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ, ಎಚ್ಚರಿಕೆ ಫಲಕಗಳು ಮತ್ತು ಬ್ಯಾರಿಕೇಡ್‌ಗಳನ್ನು ಅಳವಡಿಸದಿರುವುದೇ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಇಂತಹ ದುರ್ಘಟನೆಗಳು ಮರುಕಳಿಸದಂತೆ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಅಗತ್ಯ ಸುರಕ್ಷತಾ ವ್ಯವಸ್ಥೆ ಕಲ್ಪಿಸಿ, ರಸ್ತೆ ದೀಪ, ಪ್ರತಿಫಲಿತ ಎಚ್ಚರಿಕೆ ಫಲಕಗಳು ಹಾಗೂ ಸುರಕ್ಷತಾ ಬ್ಯಾರಿಕೇಡ್‌ಗಳನ್ನು ತಕ್ಷಣ ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
