Karwar| ತಾಲೂಕಿನ ಶಿರವಾಡ ಗ್ರಾಮದ ಬಂಗಾರಪ್ಪ ನಗರದಲ್ಲಿ ವಿದ್ಯುತ್ ವೋಲ್ಟೇಜ್ನಲ್ಲಿ ಏಕಾಏಕಿ ಉಂಟಾದ ಭಾರಿ ಏರಿಳಿತದಿಂದ ಹಲವು ಮನೆಗಳಲ್ಲಿದ್ದ ವಿದ್ಯುತ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟುಹೋಗಿದ್ದು, ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ.

ಹಠಾತ್ ವೋಲ್ಟೇಜ್ ಹೆಚ್ಚಾದ ಪರಿಣಾಮ ಟಿವಿ, ಫ್ಯಾನ್, ಫ್ರಿಜ್, ಮೊಬೈಲ್ ಚಾರ್ಜರ್, ಮಿಕ್ಸರ್ ಸೇರಿದಂತೆ ದಿನನಿತ್ಯ ಬಳಕೆಯ ಹಲವು ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿವೆ. ಈ ಘಟನೆಯಿಂದ ಹಲವು ಮನೆಗಳ ಗೃಹೋಪಯೋಗಿ ವಸ್ತುಗಳು ಸುಟ್ಟು, ಲಕ್ಷಾಂತರ ರೂಪಾಯಿ ಮೌಲ್ಯದ ನಷ್ಟ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯ ವೇಳೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿದ್ಯುತ್ ಅವಘಡದಿಂದ ಹಾನಿಗೊಳಗಾದ ನಿವಾಸಿಗಳು ಹೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದ್ದು, ಘಟನೆಗೆ ಕಾರಣವಾದ ತಾಂತ್ರಿಕ ದೋಷವನ್ನು ತಕ್ಷಣ ಪರಿಶೀಲಿಸಿ, ನಷ್ಟಕ್ಕೊಳಗಾದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಜೊತೆಗೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
