Sirsi| ತಾಲೂಕಿನ ತಾರಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡಗೋಡ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಅಂದರ್-ಬಾಹರ್ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ಶಿರಸಿ ಗ್ರಾಮೀಣ ಪೊಲೀಸರು ಭರ್ಜರಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಜೂಜಾಟದಲ್ಲಿ ತೊಡಗಿದ್ದ ಹದಿನೈದು ಮಂದಿಯನ್ನು ವಶಕ್ಕೆ ಪಡೆದುಕೊಂಡು ಜೂಜಾಟಕ್ಕೆ ಬಳಸಿದ್ದ ₹60,400 ಜಫ್ತು ಮಾಡಿದ್ದಾರೆ.

ತಾರಗೋಡದ ನಿಡಗೋಡಿನ ಮಂಜು ಮಾಚಾ ಪೂಜಾರಿ, ಆನಂದ ಸುಬ್ರಾಯ ನಾಯ್ಕ, ಮಾದೇವ ಚನ್ನಾ ಪೂಜಾರಿ, ಹನುಮಂತ ಗೋವಿಂದ ಪೂಜಾರಿ, ದುರ್ಗಾ ಮಾಚಾ ಪೂಜಾರಿ, ಮಂಜುನಾಥ ವೆಂಕಟ ಬಿಲ್ಲವ, ಭಾಸ್ಕರ ಸುಬ್ಬಾ ದೇವಾಡಿಗ, ಸೀನಾ ಮಂಜು ಪೂಜಾರಿ, ಹಿರಿಯ ಶೇಷಾ ಪೂಜಾರಿ, ಗಣಪತಿ ವೆಂಕಟ ಪೂಜಾರಿ, ಸುಬ್ರಾಯ ತಿಮ್ಮಪ್ಪ ಪೂಜಾರಿ, ರುದ್ರ ಶಿವು ಗೌಡ, ಮಂಜು ಶೇಷಾ ಪೂಜಾರಿ, ವೆಂಕಟ್ರಮಣ ಈಶ್ವರ ಗೌಡ, ಚಂದ್ರಶೇಖರ ನಾಗಾ ನಾಯ್ಕ ಹಾಗೂ ಕೃಷ್ಣ ತಿಪ್ಪಯ್ಯ ನಾಯ್ಕ ಸೇರಿದಂತೆ ಒಟ್ಟು ಹದಿನಾರು ಜನ ಪೋಲಿಸರ ವಶಕ್ಕೆ ಸಿಕ್ಕವರು ಎಂದು ಗುರುತಿಸಲಾಗಿದೆ.

ಜುಲೈ 6 ರಂದು ಸಂಜೆ ವೇಳೆಗೆ ತಾರಗೋಡ ಪಂಚಾಯತ ವ್ಯಾಪ್ತಿಯ ನಿಡಗೋಡ ಬಳಿಯ ಅರಣ್ಯ ಪ್ರದೇಶದಲ್ಲಿ ಆರೋಪಿಗಳು ಹಣ ಪಣಕ್ಕಿಟ್ಟು ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದರು. ಆ ವೇಳೆ ಖಚಿತ ಮಾಹಿತಿ ಮೇರೆಗೆ ಶಿರಸಿ ಗ್ರಾಮೀಣ ಠಾಣೆಯ ಪಿಸ್ಸೈ ಸಂತೋಷಕುಮಾರ್‍, ಪೋಲಿಸ್‌ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆರೋಪಿಗಳಿಂದ ₹60,400 ನಗದು, 52 ಇಸ್ಪೀಟ್ ಎಲೆಗಳು ಹಾಗೂ ಒಂದು ಕಂಬಳಿ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.