ಸುಳ್ಯ: ದೇಶಾದ್ಯಂತ ‘ತೂಗುಸೇತುವೆಗಳ ಸರದಾರ’ ಎಂದೇ ಖ್ಯಾತಿ ಪಡೆದಿದ್ದ, ಪದ್ಮಶ್ರೀ ಪುರಸ್ಕೃತ ಖ್ಯಾತ ಸೇತುವೆ ತಜ್ಞ ಡಾ. ಗಿರೀಶ್ ಭಾರದ್ವಾಜ (76) ಅವರು ಮಂಗಳವಾರ ಮುಂಜಾನೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ನಿಧನ ಹೊಂದಿದರು..

ಡಾ. ಭಾರದ್ವಾಜ ಅವರು ಕಳೆದ ಕೆಲ ದಿನಗಳಿಂದ ಹೃದಯ ಸಂಬಂಧಿತ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಕೆಲ ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ದೇವಸ್ಥಾನಗಳಿಗೆ ಭೇಟಿ ನೀಡಿ ಬಂದಿದ್ದರು. ಕೆಲ ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಡಿಮೆ ವೆಚ್ಚದಲ್ಲಿ, ಪರಿಸರ ಸ್ನೇಹಿ ತೂಗುಸೇತುವೆಗಳ ನಿರ್ಮಾಣದ ಮೂಲಕ ದೇಶ-ವಿದೇಶಗಳಲ್ಲಿ ವಿಶಿಷ್ಟ ಹೆಗ್ಗಳಿಕೆ ಗಳಿಸಿದ್ದ ಡಾ. ಗಿರೀಶ್ ಭಾರದ್ವಾಜ ಅವರು ಗ್ರಾಮೀಣ ಜನರಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳನ್ನು ನಿರ್ಮಿಸಿ ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದರು. ಅವರ ಸಾಮಾಜಿಕ ಸೇವೆ ಹಾಗೂ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಸಲ್ಲಿಸಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.