Udupi| ಉದ್ಯಮಿಯೋರ್ವರು ಹೂಡಿಕೆ ಮಾಡಲು ನೀಡಿದ್ದ ಹಣವನ್ನು ದುರ್ಬಳಕೆ ಮಾಡಿ ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.
ಕಾಪು ಪಡುಬಿದ್ರಿ ನಡ್ಸಾಲು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಜೀನತ್ ಇಬ್ರಾಹಿಂ (41) ಪ್ರಕರಣದಲ್ಲಿ ಬಂಧಿತ ಆರೋಪಿ ಮಹಿಳೆ. ಕುಂದಾಪುರದ ವಿಜಯ್ ಒಲಿವರ್ (51) ಎಂಬವರು ಉಡುಪಿಯಲ್ಲಿ ರಿಯಲ್ ಎಸ್ಟೆಟ್ ವ್ಯವಹಾರ ಮಾಡಿಕೊಂಡಿದ್ದು, ಈ ವೇಳೆ ಆರೋಪಿ ಜೀನತ್ ಇಬ್ರಾಹಿಂ ಎಂಬಾಕೆಯ ಪರಿಚಯವಾಗಿತ್ತು. ಬಳಿಕ ಇಬ್ಬರೂ ಜಂಟಿಯಾಗಿ ರಿಯಲ್ ಎಸ್ಟೇಟ್ ಕಚೇರಿ ಪ್ರಾರಂಭಿಸಿದ್ದರು. ಆರೋಪಿ ಮಹಿಳೆಯ ಮಾತುಗಳನ್ನು ನಂಬಿ ಹೂಡಿಕೆ ಮಾಡುವ ಉದ್ದೇಶದಿಂದ ವಿಜಯ್ ಎಂಬವರು ₹70 ಲಕ್ಷರೂ. ಹಣವನ್ನು ಆರೋಪಿಗೆ ನೀಡಿದ್ದರು. ಈ ಹಣವನ್ನು ಆರೋಪಿ ಮಹಿಳೆ ಜಮೀನು ಖರೀದಿಗೆ ಬಳಸದೇ ತನ್ನ ಸ್ವಂತ ಉದ್ದೇಶಗಳಿಗಾಗಿ ಬಳಸಿಕೊಂಡು ಮೋಸ ಮಾಡಿದ್ದಳು ಎನ್ನಲಾಗಿದೆ. ಇದನ್ನು ತಿಳಿದು ವಿಜಯ್ ತನ್ನ ಕಚೇರಿಯನ್ನು ಮುಚ್ಚುವ ಸಂದರ್ಭ ಅಲ್ಲಿದ್ದ ಕೆಲವು ರಹಸ್ಯ ಕಡತಗಳು ಮತ್ತು ಪೆನ್‌ಡ್ರೈವ್ ಸಿಕ್ಕಿದ್ದು, ಅದರಲ್ಲಿ ಹಲವಾರು ಪ್ರಭಾವಿ ಗಣ್ಯ ವ್ಯಕ್ತಿಗಳ ಖಾಸಗಿ ಮತ್ತು ಅಶ್ಲೀಲ ಛಾಯಾಚಿತ್ರಗಳು ಹಾಗೂ ವಿಡಿಯೋಗಳು ಇರುವುದು ಕಂಡುಬಂದಿದೆ. ವಿಜಯ್ ತನ್ನ ಹಣವನ್ನು ಆರೋಪಿ ಮಹಿಳೆಯ. ಬಳಿ ವಾಪಾಸ್ ನೀಡುವಂತೆ ಕೇಳಿದಾಗ, ಆರೋಪಿ ಮಹಿಳೆಯು ವಿಜಯ್ ಅವರ ಹೊಸ ಕಚೇರಿಗೆ ಬಂದು, ಮತ್ತಷ್ಟು ಹಣಕ್ಕೆ ಬೇಡಿಕೆ ಇಡಲು ಪ್ರಾರಂಭಿಸಿದ್ದಳು. ಹಣ ನೀಡದಿದ್ದರೆ ವಿಜಯ್ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಳು. ತನ್ನ ಬಳಿ ವಿಜಯ್ ಅವರ ಅಶ್ಲೀಲ ವಿಡಿಯೋಗಳಿವೆ ಎಂದು ಹೇಳಿ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡತೊಡಗಿದ್ದಲ್ಲದೇ, ವಿಜಯ್ ಅವರ ಹೆಂಡತಿ ಮಕ್ಕಳನ್ನು ಕಿಡ್ನ್ಯಾಪ್ ಮಾಡಿ, ತುಂಡು ತುಂಡು ಮಾಡಿ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಳು ಎನ್ನಲಾಗಿದೆ.
ಆರೋಪಿ ಜೀನತ್ ಕೃತ್ಯಕ್ಕೆ ಸಬೀನಾ ಇಲಿಯಾಸ್ ಹಾಗೂ ಇತರರು ಸಾಥ್ ನೀಡಿದ್ದು, ಈ ಹಿನ್ನೆಲೆ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಿ ಅಕ್ರಮವಾಗಿ ಹಣ ವಸೂಲಿ ಮಾಡುವ ಮೂಲಕ ವಂಚನೆಯ ಜಾಲವನ್ನು ನಡೆಸಲಾಗುತ್ತಿದೆ ಎಂದು ವಿಜಯ್ ನೀಡಿದ್ದ ದೂರಿನ ಹಿನ್ನೆಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಸಂಬಂಧಿಸಿ ಆರೋಪಿಗಳ ಪತ್ತೆಗೆ ಪಿಎಸ್ಸೈ ಭರತೇಶ್ ಕಂಕಣವಾಡಿ ವಿಶೇಷ ತಂಡ ರಚಿಸಿದ್ದು, ಈ ತಂಡವು ಜುಲೈ 2ರಂದು ಆರೋಪಿ ಝೀನತ್ ಇಬ್ರಾಹಿಂಳನ್ನು ಪಡುಬಿದ್ರೆಯ ಕಂಚಿನಡ್ಕ ಎಂಬಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚುವರಿ ತನಿಖೆಗಾಗಿ ಆರೋಪಿ ಮಹಿಳೆಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅಲ್ಲದೇ, ಪ್ರಕರಣ ಉಳಿದ ಆರೋಪಿಗಳಿಗಾಗಿ ಪೊಲೀಸರಿಂದ ಹುಡುಕಾಟ ಮುಂದುವರಿದಿದೆ.
