Haliyal| ಹಳಿಯಾಳ ಪಟ್ಟಣದಲ್ಲಿ ಸರಣಿ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಅಂತರ್‌ಜಿಲ್ಲಾ ಆರೋಪಿಯನ್ನು ಬಂಧಿಸಿ ಮೂರು ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಜೂನ್ 25ರಂದು ಹಳಿಯಾಳದ ಬಾಲಾಜಿ ವೈನ್ ಶಾಪ್ ಸಮೀಪ ನಿಲ್ಲಿಸಲಾಗಿದ್ದ ಹೊಂಡಾ ಆಕ್ಟಿವಾ (ಕೆಎ-31 ಯು-3585) ಕಳ್ಳತನವಾಗಿದ್ದ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗಾಗಿ ವಿಶೇಷ ಪತ್ತೆ ತಂಡ ರಚಿಸಲಾಗಿತ್ತು.

ಜೂನ್ 30ರಂದು ಖಚಿತ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಬೆಳಗಾವಿ ಜಿಲ್ಲೆಯ ಶಹಾಪುರ ನಿವಾಸಿ ಸರ್ವೇಶ್ ಶಿವಲಿಂಗಯ್ಯ ಮಠಪತಿ ಎಂಬ ಆರೋಪಿಯನ್ನು ಹಳಿಯಾಳದಲ್ಲಿ ಬಂಧಿಸಿ ವಿಚಾರಣೆ ನಡೆಸಿದಾಗ, ಹಳಿಯಾಳ ಪೊಲೀಸ್ ಠಾಣೆಯ ಗುನ್ನಾ ಸಂಖ್ಯೆ 170/2026, 175/2026 ಹಾಗೂ 178/2026ರ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳಲ್ಲಿ ತಾನೇ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಆರೋಪಿಯಿಂದ ಮೂರು ಮೋಟಾರ್ ಸೈಕಲ್‌ಗಳನ್ನು ಜಪ್ತಿ ಮಾಡಲಾಗಿದೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.