ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಂತೂ ಮೀನುಗಾರರು ಮತ್ಸ್ಯಕ್ಷಾಮದಿಂದಾಗಿ ಲಕ್ಷಗಟ್ಟಲೆ ನಷ್ಟ ಎದುರಿಸುತಿದ್ದಾರೆ.

ಅವೈಜ್ಞಾನಿಕ ಮೀನುಗಾರಿಕೆ ಸಮುದ್ರ ಜೀವಿಗಳನ್ನು ಅವನತಿಯ ಹಾದಿಗೆ ತಳ್ಳುತ್ತಿದೆ. ಈ ಬಗ್ಗೆ ಅರಿವಿದ್ದರೂ  ಕೆಲವರು ಅತೀ ಲಾಭದ ಉದ್ದೇಶದಿಂದ ವಿವಿಧ ರೀತಿಯಲ್ಲಿ ಅವೈಜ್ಞಾನಿಕ‌ ಮೀನುಗಾರಿಕೆ ನಡೆಸಿ  ಖುದ್ದಾಗಿ ಮೀನುಗಾರರ ಹೊಟ್ಟೆಗೆ ಹೊಡೆಯುತಿದ್ದಾರೆ.

ನಾಯಿ ಬಾಲ ಡೊಂಕು ಅನ್ನೋ ಹಾಗೆ ತಮ್ಮದೇ ಮೀನುಗಾರ ಸಮುದಾಯದ ಹೊಟ್ಟೆಗೆ ಅನ್ನವಿಲ್ಲದಿದ್ರು ಪರವಾಗಿಲ್ಲ. ತಾವು ಮಾತ್ರ ಲಕ್ಷಗಟ್ಟಲೆ ಲಾಭ ಗಳಿಸಿ, ತಿಂದುಂಡು, ಗಡದ್ದಾಗಿ ಜೀವನ ಮಾಡಬೇಕು ಅನ್ನೋ ದೃಷ್ಠಿಯೊಂದಿಗೆ ಇಂದಿಗೂ ಹಲವರು ಅವೈಜ್ಞಾನಿಕ ಮೀನುಗಾರಿಕೆ ನಡೆಸುತ್ತಿದ್ದಾರೆ.

ಇದಕ್ಕೆ ಸಾಕ್ಷಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಬೆಳಂಬಾರಿನಲ್ಲಿ ಅಕ್ರಮ ಹಾಗೂ ಅವೈಜ್ಞಾನಿಕವಾಗಿ ನಡೆಯುತ್ತಿರುವ ಬೊಂಡಾಸ್ ಮೀನುಗಾರಿಕೆ. ಜಿಲ್ಲೆಯ ಕಾರವಾರದಲ್ಲಿ ರಾತ್ರಿಯಾಗುತ್ತಿದ್ದಂತೇ ಪ್ರಾರಂಭಗೊಳ್ಳುತ್ತಿದ್ದ ಈ ಅಕ್ರಮ ಹಾಗೂ ಅವೈಜ್ಞಾನಿಕ ಬೊಂಡಾಸ್ ಮೀನುಗಾರಿಕೆ, ಇದೀಗ ಅಂಕೋಲಾದ ಬೆಳಂಬಾರಿನಲ್ಲೂ ಭರ್ಜರಿಯಾಗಿ ನಡೆಯುತ್ತಿದೆ.

ಅವೈಜ್ಞಾನಿಕ ಬೊಂಡಾಸ್ ಮೀನುಗಾರಿಕೆಯ ಜೊತೆಗೆ ಲೈಟ್ ಫಿಶಿಂಗ್ ಕೂಡಾ ನಿರಂತರವಾಗಿ ನಡೆಯುತ್ತಿದೆ. ರಾತ್ರಿ ಸಮಯದಲ್ಲಿ ಸಮುದ್ರದ ಮದ್ಯೆ ಅತ್ಯಧಿಕ ಸಾಮಥ್ಯದ ಬೆಳಕನ್ನು ಸಮುದ್ರಕ್ಕೆ ಬಿಡುತ್ತಾರೆ. ಈ ಪ್ರಕಾಶಮಾನ ಬೆಳಕಿಗೆ ಮೀನುಗಳು ಆಕರ್ಶಿಸಿ ಬರುತ್ತವೆ. ಇಂಥಹ ಮೀನುಗಳನ್ನು ಒಮ್ಮೆಲೆ ಬಲೆಹಾಕಿ ಹಿಡುತ್ತಾರೆ.

ಲೇಟ್ ಫಿಶಿಂಗ್  ಗೆ ಸರ್ಕಾರ ನಿರ್ಭಂಧಿಸಿದೆ. ಕಾರಣ ಪ್ರಕಾಶಮಾನ ಬೆಳಿಗೆ ಆಕರ್ಶಿತವಾಗಿ ಚಿಕ್ಕ ಚಿಕ್ಕ ಮರಿಗಳು ಬರುತ್ತವೆ. ಅವುಗಳನ್ನು ಒಮ್ಮೆಲೆ ಬಲೆಗೆ ಬಿಳಸಿಕೊಂಡರೆ ಕಾಲಕ್ರಮೇಣ ಮೀನಿನ ಸಂತತಿ ಅವಸಾನದ ಅಂಚಿಗೆ‌ ಸರಿಯಲಿದೆ.

ಇನ್ನೂ ಬೊಂಡಾಸ್ ಮೀನುಗಾರಿಕೆ ಕಾರವಾರದಲ್ಲಿ  ನಡೆಯುತ್ತಿದ್ದಾಗ ಮಾಧ್ಯಮಗಳು ಇದನ್ನು ಪ್ರಸಾರ ಮಾಡಿ ಅಧಿಕಾರಿಗಳ ಗಮನಕ್ಕೆ ತಂದಾಗ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಕೊಂಚ ದಿನಗಳ ಕಾಲ ಬಾಲ ಮುದುರಿಕೊಂಡು ಕುಳಿತಿದ್ದ ಈ ದಂಧೆಕೋರರು, ಇದೀಗ ಅಂಕೋಲಾದಲ್ಲಿ ಮತ್ತೆ ಬಾಲ ಬಿಚ್ಚಿದ್ದಾರೆ.

ಅಂದಹಾಗೆ, ಇದೆಲ್ಲಾ  ಅಧಿಕಾರಿಗಳ ಕೃಪಾಕಟಾಕ್ಷದಲ್ಲೇ ನಡೆಯುತ್ತಿದ್ದು, ಸ್ಥಳೀಯರ ಸಹಯೋಗದಲ್ಲಿ ತಮಿಳರಿಂದ ಭಾರೀ ಪ್ರಮಾಣದಲ್ಲಿ ಈ ಅವೈಜ್ಞಾನಿಕ ಬೊಂಡಾಸ್ ಮೀನುಗಾರಿಕೆ ನಡೆಯುತ್ತಿದೆ. ಇವರು ಹಿಡಿಯೋ ಒಂದೊಂದು ಬೊಂಡಾಸ್ ಕೂಡಾ 2ರಿಂದ 3 ಕೆ.ಜಿ. ತೂಕ ಹೊಂದಿರುತ್ತವೆ. ಈ ಬೊಂಡಾಸ್ ಹಿಡಿಯಲು ಪ್ರತೀ ದಿನ‌ ಟನ್‌ಗಟ್ಟಲೇ ಪ್ಲಾಸ್ಟಿಕ್ ಬಾಟಲ್ಸ್ ಸಮುದ್ರದ ಒಡಲು ಸೇರುತ್ತಿವೆ.

ಪ್ಲಾಸ್ಟಿಕ್ ಬಾಟಲ್‌ಗಳನ್ನು ಪ್ಲಾಸ್ಟಿಕ್ ದಾರದಿಂದ ಪೋಣಿಸಿ ಅದರ ಮೇಲೆ ಗಾಳಿ ಮರದ ಸೊಪ್ಪುಗಳನ್ನು ಇಟ್ಟು, ತಳಭಾಗದಲ್ಲಿ ಮಣ್ಣು ಅಥವಾ ಮರಳಿನ ಚೀಲ ಕಟ್ಟಿ ಗೂಡಿನಂತೆ ರೂಪಿಸಲಾಗುತ್ತದೆ.‌ ಸಮುದ್ರ ತೀರದಿಂದ ಸುಮಾರು 4-5 ಕಿ.ಮೀ.‌ದೂರದಲ್ಲಿ ಇಂತಹ‌ ಹಲವು ಗೂಡುಗಳನ್ನು ತೇಲಿ ಬಿಡಲಾಗುತ್ತದೆ.

ನೈಸರ್ಗಿಕ ಗೂಡುಗಳು ಎಂದುಕೊಂಡು ಇವುಗಳ‌ ಒಳಗೆ ಮೊಟ್ಟೆಯಿಡಲು ಬಂದು ಜಾಲಕ್ಕೆ ಸಿಕ್ಕಿ ಬೀಳುತ್ತವೆ ಬೃಹತ್ ಗಾತ್ರದ ಬೊಂಡಾಸ್ ಮೀನುಗಳು. ಈ ಬೃಹತ್ ಗಾತ್ರದ ಬೊಂಡಾಸ್ ಮೀನುಗಳನ್ನು ಹಿಡಿದು ಐಸ್ ಪ್ಯಾಕ್ ಮಾಡಿ, ಕೇರಳದ ಕೊಚ್ಚಿ ಮೂಲಕ ಗಲ್ಫ್ ದೇಶಗಳಿಗೆ ರಫ್ತು ಮಾಡಲಾಗತ್ತದೆ.

ಈ ಅಕ್ರಮ ಹಾಗೂ ಅವೈಜ್ಞಾನಿಕ ವ್ಯವಸ್ಥೆಯ ಮೂಲಕ ರಾತ್ರಿಯಾಗುತ್ತಲೇ ಕೋಟಿಗಟ್ಟಲೇ ಮೌಲ್ಯದ ವ್ಯವಹಾರಗಳು ನಡೆಯುತ್ತವೆ. ಈ ಹಿಂದೆ

ಕಾರವಾರದ ಹಳಿಗದ್ದಾ, ಬೈತ್‌ಕೋಲ ಪ್ರದೇಶ ಮುಂತಾದೆಡೆ ತಡರಾತ್ರಿಯಾದಂತೆ ಆ್ಯಕ್ಟಿವ್ ಆಗುತ್ತಿದ್ದ ಈ ಅಕ್ರಮ‌ ಮೀನುಗಾರಿಕೆ ಇದೀಗ ಅಂಕೋಲಾದ ಬೆಳಂಬಾರು ಹಾಗೂ ಕೆಲವೆಡೆ ಅಂಕೋಲಾದಲ್ಲೂ ಮುಂದುವರಿದಿದೆ.  ಹೊರ ರಾಜ್ಯದ ಕಾರ್ಮಿಕರ ಸೋಗಿನಲ್ಲಿ‌ ಸುಲಭವಾಗಿ ಯಾರು ಕೂಡಾ ಉತ್ತರಕನ್ನಡ ಜಿಲ್ಲೆಗೆ ಸುಲಭವಾಗಿ  ಎಂಟ್ರಿಕೊಡಬಹುದಾಗಿದೆ.‌

ಅಕ್ರಮವಾಗಿ ನಡೆಯೋ ಬೊಂಡಾಸ್ ಮೀನುಗಳ ಒಳಗಿಟ್ಟು ತಡರಾತ್ರಿ ಯಾವುದೇ ಶಸ್ತ್ರಾಸ್ತ್ರ, ಬಾಂಬ್ ತರಲೂ ಇದೆ ಅವಕಾಶಗಳಿವೆ. ರಾತ್ರಿ ವೇಳೆ ಮೀನುಗಾರಿಕೆಗೆ ಇಳಿಯೋ ಈ ತಮಿಳಿಗರು ಯಾರು ? ಅವರೇಕೆ ಅಂಕೋಲಾ, ಕಾರವಾರದಲ್ಲಿದ್ದಾರೆ ಅನ್ನೋ ಮೀನುಗಾರಿಕೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯಲ್ಲಿಲ್ಲ. ಒಂದೆಡೆ ದೇಶದ ಅತೀ ದೊಡ್ಡ ಯೋಜನೆಯಾದ ಸೀಬರ್ಡ್, ಮತ್ತೊಂದೆಡೆ ಕೈಗಾ ಅಣು ವಿದ್ಯುತ್ ಸ್ಥಾವರ, ಇನ್ನೊಂದೆಡೆ ಸಾಕಷ್ಟು ಡ್ಯಾಂಗಳನ್ನು ಹೊಂದಿರುವ ಜಿಲ್ಲೆ ಉತ್ತರಕನ್ನಡ. ಒಂದು ವೇಳೆ ಗುರುತು, ಪರಿಚಯ ಇಲ್ಲದ ಈ ತಮಿಳಿಗರು ಅಥವಾ ಇತರ ರಾಜ್ಯಗಳಿಂದ ಬಂದಿರುವವರು ಉಗ್ರ ಸಂಘಟನೆಗಳಿಗೆ ಸೇರಿದವರಾಗಿದ್ರೆ ಅಧಿಕಾರಿಗಳ ಭಾರೀ ನಿರ್ಲಕ್ಷ್ಯದಿಂದ ಒಂದು ದಿನ ಉತ್ತರಕನ್ನಡ ಜಿಲ್ಲೆಗೆ ಭಾರೀ ಕಂಟಕ ತಪ್ಪಿದ್ದಲ್ಲ.

ಕೇಂದ್ರದ ಇಂಟೆಲಿಜೆನ್ಸ್ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ರೂ ರಾಜ್ಯದ ಮೀನುಗಾರಿಕೆ ಇಲಾಖೆ, ಪೊಲೀಸ್ ಇಲಾಖೆ, ಕೋಸ್ಟಲ್ ಪೊಲೀಸರಿಗೆ ಏನೇ ನಡೆದ್ರೂ ಟೆನ್ಶನ್ ಇಲ್ಲ. ಇನ್ನಾದ್ರೂ ಅಕ್ರಮಗಳಿಗೆ ಕಡಿವಾಣ ಹಾಕಿ, ಸ್ಥಳೀಯರಿಗೆ ಸಾಥ್ ನೀಡುತ್ತಿರುವ ತಮಿಳಿಗರು ಹಾಗೂ ಇತರ ರಾಜ್ಯಗಳ ಕಾರ್ಮಿಕರು ಯಾರು ಎಂದು ಸಂಬಂಧಪಟ್ಟವರು ತನಿಖೆ ನಡೆಸಿದ್ರೆ ಅವೈಜ್ಞಾನಿಕ ಮೀನುಗಾರಿಕೆ ತಡೆಯಬಹುದಲ್ಲದೇ, ಭವಿಷ್ಯದಲ್ಲಿ ಜಿಲ್ಲೆಗೆ ಎದುರಾಗುವ ಕಂಟಕವನ್ನೂ ತಡೆಯಬಹುದು.