Karwar| ತಾಲೂಕಿನ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕಿನ್ನರ ಗ್ರಾಮದ ಕೊತ್ಲವಾಡ ಮಜರೆಯ ಮನೆಯೊಂದರ ಅಂಗಳದಲ್ಲಿ ಅಕ್ರಮವಾಗಿ ಗೋವಾ ರಾಜ್ಯದ ಮದ್ಯವನ್ನು ಮಾರಾಟಕ್ಕಾಗಿ ಸಂಗ್ರಹಿಸಿದ್ದ ಆರೋಪದ ಮೇಲೆ 75 ವರ್ಷದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಕಿನ್ನರದ ಕೊತ್ಲವಾಡಾದ ವಿಠೋಬಾ ತಂದೆ ಮಾಬ್ಲು ರಾಣೆ (75) ಎಂಬುವವರ ಮೇಲೆ ಪ್ರಕರಣದ ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಜೂನ್ 27ರಂದು ಸಂಜೆ ಸುಮಾರು 7 ಗಂಟೆಗೆ ನಡೆಸಿದ ದಾಳಿಯಲ್ಲಿ, ವಿಠೋಬಾ ರಾಣೆ ಅವರ ಮನೆಯ ಅಂಗಳದಲ್ಲಿ ಯಾವುದೇ ಪಾಸ್ ಅಥವಾ ಪರವಾನಗಿ ಇಲ್ಲದೆ ಮದ್ಯವನ್ನು ಮಾರಾಟ ಉದ್ದೇಶದಿಂದ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಪೋಲಿಸರು ದಾಳಿ ವೇಳೆ 180 ಮಿ.ಲೀಟರ್ ಹನ್ನೊಂದು DSP Black Deluxe Whisky ಬಾಟಲಿಗಳು, 180 ಮಿ.ಲೀಟರ್ ನ ಐದು Light Horse Whisky ಬಾಟಲಿಗಳು, 180 ಮಿ.ಲೀಟರಿನ ಎರಡು McDowell’s No.1 Original Whisky ಬಾಟಲಿಗಳು, 750 ಮಿ.ಲೀಟರಿನ ಐದು Light Horse Whisky ಬಾಟಲಿಗಳು ಹಾಗೂ 750 ಮಿ.ಲೀಟರಿನ ಒಂದು Cinthol Super Deluxe Cashew Fenny ಬಾಟಲಿ ದೊರೆತಿವೆ. ದಾಳಿ ವೇಳೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕರ್ನಾಟಕ ಅಬಕಾರಿ ಕಾಯ್ದೆಯ ಕಲಂ 32 ಮತ್ತು 34ರಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸ್ ಉಪನಿರೀಕ್ಷಕ ನೇಹಾಲ ಖಾನ್ ಕೈಗೊಂಡಿದ್ದಾರೆ.
