ಕಾರವಾರ|ಮೊಹರಂ ಹಬ್ಬ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಊರುಗಳಿಗೆ ಪ್ರಯಾಣಿಸುವ ನಿರೀಕ್ಷೆಯಿರುವುದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKSRTC) ಹೆಚ್ಚುವರಿ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ.

ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಹಾಗೂ ಬಾಗಲಕೋಟೆ ವಿಭಾಗಗಳಿಂದ ಸುಮಾರು 200 ಹೆಚ್ಚುವರಿ ವಿಶೇಷ ಬಸ್‌ಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಜೂನ್ 25 ಹಾಗೂ 26ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಅಂತರರಾಜ್ಯ ಮಾರ್ಗಗಳ ಪ್ರಮುಖ ಸ್ಥಳಗಳಿಗೆ ಹೆಚ್ಚುವರಿ ಬಸ್‌ಗಳನ್ನು ಬಿಡಲಾಗುತ್ತಿದೆ.

ಹಬ್ಬ ಹಾಗೂ ರಜೆ ಸಂದರ್ಭದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹೆಚ್ಚುವರಿ ಸಾರಿಗೆ ಸೌಲಭ್ಯವನ್ನು ಬಳಸಿಕೊಳ್ಳುವಂತೆ ವಾಕರಸಾಸಂ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುರಕ್ಷಿತ ಹಾಗೂ ಸುಖಕರ ಪ್ರಯಾಣಕ್ಕಾಗಿ ಪ್ರಯಾಣಿಕರು ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುವಂತೆ ಮನವಿ ಮಾಡಿದ್ದಾರೆ.