ಉಡುಪಿ: ಜಿಲ್ಲಾ ನ್ಯಾಯಾಲಯದ ಮುಖ್ಯ ನಿರ್ವಹಣಾಧಿಕಾರಿ ಕಚೇರಿಯ ಇ-ಮೇಲ್‌ಗೆ ಸೋಮವಾರ ಬೆಳಗ್ಗೆ ನಕಲಿ ಬಾಂಬ್ ಬೆದರಿಕೆಯ ಸಂದೇಶ ಬಂದ ಹಿನ್ನೆಲೆ ಪೊಲೀಸರು ಅಲರ್ಟ್ ಆಗಿಟ ನ್ಯಾಯಾಲಯ ಸಂಕೀರ್ಣವನ್ನು ಪರಿಶೀಲನೆ ನಡೆಸಿದ ಘಟನೆ ನಡೆದಿದೆ.‌

ಜಿಲ್ಲಾ ನ್ಯಾಯಾಲಯದ ಮುಖ್ಯ ನಿರ್ವಾಹಣಾಧಿಕಾರಿ ಜೂ.22 ರಂದು ಕಚೇರಿಗೆ ಬೆಳಿಗ್ಗೆ 10:45ಕ್ಕೆ ಬಂದು ತನ್ನ ಕಚೇರಿಯಲ್ಲಿರುವ ಈ-ಮೇಲ್‌ನ್ನು ಪರಿಶೀಲಿಸಿದ್ದರು. ಈ ವೇಳೆ ಜೂ.21ರಂದು ಸಂಜೆ 6.33ಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆಂದು ಇಂಗ್ಲೀಷ್‌ನಲ್ಲಿ ಸಂದೇಶ ಕಳುಹಿಸಲಾಗಿದ್ದು, ಇದರಲ್ಲಿ 2+2 ಆರ್‌ಡಿಎಕ್ಸ್ ಬಾಂಬ್‌ಗಳು ಉಡುಪಿ ಹಾಗೂ ತಂಜಾವೂರು ನ್ಯಾಯಾಯದಲ್ಲಿ ಬ್ಲಾಸ್ಟ್ ಆಗಲಿದೆ.

ಉದಯನಿಧಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿಲ್ಲ. ಎರಡು ಬಾಂಬ್‌ಗಳು ಒಂದೇ ಸಮಯದಲ್ಲಿ ಮಧ್ಯಾಹ್ನ 2 ಗಂಟೆಗೆ ನ್ಯಾಯಾಧೀಶರ ಚೇಂಬರ್/ ನ್ಯಾಯಾಲಯದ ಶೌಚಾಲಯದಲ್ಲಿ ಬ್ಲಾಸ್ಟ್ ಆಗಲಿದೆ ಎಂದು ಬರೆಯಲಾಗಿದೆ. ಅಲ್ಲದೇ,  ಕೆಳಗೆ ಉದಯನಿಧಿ ಸ್ಟಾಲಿನ್ ಎಂಬಾತನ ವಿರುದ್ಧವೂ ಗಂಭೀರ ಆರೋಪ ಮಾಡಿ, ಇಂಗ್ಲೀಷ್‌ನಲ್ಲಿ ಹಲವು ವಿಚಾರಗಳನ್ನು ಬರೆಯಲಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಉಡುಪಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕ ಬೆಳ್ಳಿಯಪ್ಪ, ನಗರ ಪೊಲೀಸ್‌ ಠಾಣೆಯ ನಿರೀಕ್ಷಕ ಮಹೇಶ್‌ ಪ್ರಸಾದ್‌ ಮತ್ತು ಉಪನಿರೀಕ್ಷಕ ಭರತೇಶ್‌ ಕಂಕಣವಾಡಿ ಅವರು ಉಡುಪಿ ನ್ಯಾಯಾಲಯ ಸಂಕೀರ್ಣಕ್ಕೆ ಭೇಟಿ ನೀಡಿದ್ದರು.

ಶ್ವಾನ ದಳ ಮತ್ತು ಬಾಂಬ್‌ ನಿಷ್ಕ್ರಿಯ ದಳವನ್ನು ನ್ಯಾಯಾಲಯ ಸಂಕೀರ್ಣಕ್ಕೆ ಕರೆಯಿಸಿ ನ್ಯಾಯಾಲಯದೊಳಗಿರುವ ಎಲ್ಲಾ ಕೋಣೆಗಳನ್ನು, ಹಾಲ್‌ ಗಳನ್ನು ಮತ್ತು ಶೌಚಾಲಯಗಳನ್ನು ತಪಾಸಣೆ ನಡೆಸಲಾಗಿದೆ. ಅಲ್ಲದೇ, ನ್ಯಾಯಾಲಯದ ಆವರಣ ಹೊರಗೂ ತಪಾಸಣೆ ನಡೆಸಲಾಗಿದೆ. ಆನಂತರ ಇದೊಂದು ಹುಸಿ ಸಂದೇಶವೆಂದು ಕಂಡು ಬಂದ ಹಿನ್ನೆಲೆ ನ್ಯಾಯಾಲಯದ ಕಲಾಪ ಮುಂದುವರಿಯಲು ಅವಕಾಶ ಮಾಡಿಕೊಡಲಾಯಿತು. ಈ ಹುಸಿ ಬಾಂಬ್‌ ಇ-ಮೇಲ್‌ ಕಳುಹಿಸಿದಾತನ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ಮುಂದುವರಿದಿದೆ‌.