Karwar| ಸಾರ್ವಜನಿಕರ ಎದುರೇ ಪೊಲೀಸರ ಮೇಲೆ ರೌಡಿ ಶೀಟರ್‌ನಿಂದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳಿಯಾಳ ಪೊಲೀಸ್ ಠಾಣೆಯ ಎಸ್ಸೈ ಬಸವರಾಜ ಅವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಆದೇಶಿಸಿದ್ದಾರೆ.
ಇತ್ತೀಚೆಗೆ ಹಳಿಯಾಳ ಪಟ್ಟಣದ ಮೌರ್ಯ ಹೋಟೆಲ್ ಬಳಿ ನಡೆದ ಘಟನೆಯಲ್ಲಿ ರೌಡಿ ಶೀಟರ್ ಮಂಜುನಾಥ ಅಲಿಯಾಸ್ ‘ಮಚ್ಚ್ ಮಂಜ’ ಪೊಲೀಸರ ಎದುರೇ ಗಲಾಟೆ ನಡೆಸಿದ್ದ. ಈ ವೇಳೆ ಎಸ್ಸೈ ಬಸವರಾಜ ಅವರ ಜೀಪ್ ತಡೆದು, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದ. ಘಟನೆಯ ಬಗ್ಗೆ ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಅಲ್ಲದೇ ಘಟನೆ ವೇಳೆ ರೌಡಿ ಶೀಟರ್ ಆರ್ಭಟ ನಡೆಸುತ್ತಿದ್ದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದೆ ಅಸಹಾಯಕರಾಗಿ ನಿಂತಿದ್ದರು ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿತ್ತು. ಪೊಲೀಸರ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಎಸ್ಸೈ ಬಸವರಾಜ ಅವರಿಂದ ಕರ್ತವ್ಯ ಲೋಪವಾಗಿದೆ ಎಂದು ಪರಿಗಣಿಸಿ ಅಮಾನತು ಆದೇಶ ಹೊರಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದೆ.
