Karwar| ಉತ್ತರಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಓಸಿ ಮಟ್ಕಾ ಜೂಜಾಟ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಐದು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡಂಗಿ ಗ್ರಾಮದ ತದಡಿ ರಸ್ತೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟ್ಕಾ ನಡೆಸುತ್ತಿದ್ದ ದೇವಪ್ಪ ಮಂಕಾಳಿ (40) ಎಂಬಾತನ ಅಡ್ಡೆ ಮೇಲೆ ಪೋಲಿಸರು ದಾಳಿ ನಡೆಸಿ, ಆತನಿಂದ ಓಸಿ ಅಂಕಿ ಸಂಖ್ಯೆ ಬರೆದ ಚೀಟಿ, ಖಾಲಿ ಹಾಗೂ ₹350 ನಗದು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಓಸಿ ಬುಕ್ಕಿ ತದಡಿಯ ಖಾದರ್ ಬಾಯಿ ಎಂಬಾತನಿಗೆ ಚೀಟಿಗಳು ಮತ್ತು ಹಣ ನೀಡುತ್ತಿದ್ದ ಎಂದು ಆರೋಪಿ ದೇವಪ್ಪ ಮಂಕಾಳಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಕೊಪ್ಪ ಬಿಡಕಿಬೈಲ್ ಪೆಟ್ರೋಲ್ ಬಂಕ್ ಎದುರು ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟ್ಕಾ ನಡೆಸುತ್ತಿದ್ದ ವಿನಾಯಕ ಭಾಸ್ಕರ ಇಳಿಗೇರ (38) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ದಾಳಿ ನಡೆಸಿ ಓಸಿ ಚೀಟಿ ಹಾಗೂ ₹550 ನಗದು ವಶಪಡಿಸಿಕೊಂಡಿದ್ದಾರೆ.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಣದ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಓಸಿ ಜೂಜಾಟ ನಡೆಸುತ್ತಿದ್ದ ವಿನಾಯಕ ಶಿವಪ್ಪ ಭಟ್ಕಳ (51) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತನಿಂದ ಓಸಿ ಚೀಟಿ ಹಾಗೂ ₹550 ನಗದು ವಶಪಡಿಸಿಕೊಳ್ಳಲಾಗಿದೆ.

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಗಲ್ಲಿ, ಬಸವೇಶ್ವರ ದೇವಸ್ಥಾನದ ಎದುರು ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟ್ಕಾ ನಡೆಸುತ್ತಿದ್ದ ರಾಮಾ ಅಜ್ಜು ಗೌಡ (58) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ದಾಳಿ ನಡೆಸಿ ₹430 ನಗದು, ಓಸಿ ಚೀಟಿ ವಶಪಡಿಸಿಕೊಂಡಿದ್ದಾರೆ.

ಜೊಯಿಡಾ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಾರವಾಡ ಗ್ರಾಮದ ದಾಂಡೇಲಿ-ಜೋಯಿಡಾ ರಾಜ್ಯ ಹೆದ್ದಾರಿ ಬಳಿ ಓಸಿ ಮಟ್ಕಾ ನಡೆಸುತ್ತಿದ್ದ ಸಂದೀಪ ಶಿವಾನಂದ ಶಿರಸಾಟ್ (50) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಆತನಿಂದ ₹290 ನಗದು ಹಾಗೂ ಓಸಿ ಚೀಟಿ ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲಾ ಪ್ರಕರಣಗಳನ್ನು ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 78(3) ಅಡಿಯಲ್ಲಿ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.