ಕಾರವಾರ: ಟಿಕೆಟ್ ಇಲ್ಲದೆ ಅಥವಾ ಅನಧಿಕೃತವಾಗಿ ರೈಲು ಪ್ರಯಾಣ ಮಾಡುವವರ ವಿರುದ್ಧ ಕೊಂಕಣ ರೈಲ್ವೆ ನಿಗಮ (KRCL) ತನ್ನ ತಪಾಸಣಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ಮೇ 2026ರ ಅವಧಿಯಲ್ಲಿ ಕೊಂಕಣ ರೈಲ್ವೆ ವ್ಯಾಪ್ತಿಯಲ್ಲಿ ಒಟ್ಟು 951 ಟಿಕೆಟ್ ತಪಾಸಣಾ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಈ ವೇಳೆ 61,051 ಮಂದಿ ಅನಧಿಕೃತ, ಅಕ್ರಮ ಪ್ರಯಾಣಿಕರನ್ನು ಪತ್ತೆಹಚ್ಚಲಾಗಿದೆ. ಇವರಿಂದ ಬಾಕಿ ರೈಲು ದರ ಹಾಗೂ ದಂಡದ ರೂಪದಲ್ಲಿ ಒಟ್ಟು ₹3.70 ಕೋಟಿ ಮೊತ್ತವನ್ನು ವಸೂಲಿ ಮಾಡಲಾಗಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ.

ಪ್ರಾಮಾಣಿಕವಾಗಿ ಟಿಕೆಟ್ ಪಡೆದು ಪ್ರಯಾಣಿಸುವ ಪ್ರಯಾಣಿಕರಿಗೆ ಸುರಕ್ಷಿತ, ಸುಗಮ ಹಾಗೂ ಆರಾಮದಾಯಕ ಸೇವೆ ಒದಗಿಸುವ ಉದ್ದೇಶದಿಂದ ಈ ತಪಾಸಣೆಗಳನ್ನು ಮುಂದುವರಿಸಲಾಗುವುದು ಎಂದು KRCL ಪ್ರಕಟಣೆಯಲ್ಲಿ ತಿಳಿಸಿದೆ.

ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ಹಾಗೂ ರೈಲ್ವೆ ಅಧಿಕಾರಿಗಳ ಸಹಯೋಗದೊಂದಿಗೆ ಕೊಂಕಣ ರೈಲ್ವೆಯ ಸಂಪೂರ್ಣ ಮಾರ್ಗದಲ್ಲಿ ಟಿಕೆಟ್ ತಪಾಸಣಾ ಅಭಿಯಾನ ಮುಂದುವರಿಯಲಿದೆ. ಎಲ್ಲಾ ಪ್ರಯಾಣಿಕರು ಮಾನ್ಯ ಟಿಕೆಟ್ ಪಡೆದು ಪ್ರಯಾಣಿಸುವಂತೆ ಹಾಗೂ ಕೊಂಕಣ ರೈಲ್ವೆಯೊಂದಿಗೆ ಸಹಕರಿಸುವಂತೆ ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಬಿ. ನಾರ್ಕರ್ ಪ್ರಕಟಣೆಯಲ್ಲಿ ಕೋರಿದ್ದಾರೆ.