ಕಾರವಾರ: ಪ್ರಯಾಣಿಕರ ಅನುಕೂಲಕ್ಕಾಗಿ ಮಹತ್ವದ ನಿರ್ಧಾರ ಕೈಗೊಂಡಿರುವ ಕೊಂಕಣ ರೈಲ್ವೆ ಇಲಾಖೆ, ಕಾರವಾರ–ಮಡಗಾಂವ್ ಜಂಕ್ಷನ್ ನಡುವೆ ಸಂಚರಿಸುತ್ತಿದ್ದ ವಿಶೇಷ ರೈಲು ಸೇವೆಯನ್ನು ಖಾಯಂ ಸೇವೆಯಾಗಿ ಪರಿವರ್ತಿಸಿದೆ.
01595/01596 ಕಾರವಾರ–ಮಡಗಾಂವ್–ಕಾರವಾರ ವಿಶೇಷ ರೈಲನ್ನು ಇನ್ನು ಮುಂದೆ 10110/10109 ಸಂಖ್ಯೆಯ ಕಾರವಾರ–ಮಡಗಾಂವ್ ಜಂಕ್ಷನ್–ಕಾರವಾರ ಎಕ್ಸ್‌ಪ್ರೆಸ್ (ದೈನಂದಿನ) ರೈಲು ಸೇವೆಯಾಗಿ ನಿಯಮಿತಗೊಳಿಸಲಾಗಿದೆ.
ಹೊಸ ವೇಳಾಪಟ್ಟಿಯ ಪ್ರಕಾರ, 10110 ಕಾರವಾರ–ಮಡಗಾಂವ್ ಎಕ್ಸ್‌ಪ್ರೆಸ್ ರೈಲು ಪ್ರತಿದಿನ ಬೆಳಗ್ಗೆ 8.30ಕ್ಕೆ ಕಾರವಾರದಿಂದ ಪ್ರಯಾಣ ಆರಂಭಿಸಿ ಬೆಳಗ್ಗೆ 9.45ಕ್ಕೆ ಮಡಗಾಂವ್ ಜಂಕ್ಷನ್ ತಲುಪಲಿದೆ.
ಅದೇ ರೀತಿ, 10109 ಮಡಗಾಂವ್–ಕಾರವಾರ ಎಕ್ಸ್‌ಪ್ರೆಸ್ ರೈಲು ಪ್ರತಿದಿನ ಸಂಜೆ 4.30ಕ್ಕೆ ಮಡಗಾಂವ್‌ನಿಂದ ಹೊರಟು ಸಂಜೆ 5.45ಕ್ಕೆ ಕಾರವಾರ ತಲುಪಲಿದೆ.
ಈ ರೈಲು ಕಾಣಕೋಣ (Canacona) ನಿಲ್ದಾಣದಲ್ಲಿ ನಿಲುಗಡೆ ಸೌಲಭ್ಯ ಹೊಂದಿರಲಿದೆ. ರೈಲಿನಲ್ಲಿ ಒಟ್ಟು 19 ಎಲ್‌ಎಚ್‌ಬಿ ಬೋಗಿಗಳ ವ್ಯವಸ್ಥೆ ಇರಲಿದ್ದು, ಇದರಲ್ಲಿ 1 ಪ್ರಥಮ ದರ್ಜೆ, 1 ಎಸಿ 2 ಟೈರ್, 1 ಎಸಿ 3 ಟೈರ್, 7 ಸ್ಲೀಪರ್, 2 ಸಾಮಾನ್ಯ ಬೋಗಿ, 1 ಎಸ್‌ಎಲ್‌ಆರ್‌ಡಿ ಹಾಗೂ 1 ಜನರೇಟರ್ ಕಾರ್ ಒಳಗೊಂಡಿರಲಿದೆ.
ಇದಲ್ಲದೆ, 3 ಎಸಿ ಇಕಾನಮಿ ಬೋಗಿ-2, ಸ್ಲೀಪರ್-1 ಹಾಗೂ ಸಾಮಾನ್ಯ ಬೋಗಿ-2 ಸೇರಿದಂತೆ ಕೆಲವು ಹೆಚ್ಚುವರಿ ಬೋಗಿಗಳನ್ನು 02-07-2026ರವರೆಗೆ ತಾತ್ಕಾಲಿಕವಾಗಿ ಜೋಡಿಸಲಾಗುತ್ತದೆ.
ಕಾರವಾರ ಮತ್ತು ಮಡಗಾಂವ್ ನಡುವಿನ ಪ್ರಯಾಣಿಕರಿಗೆ ಈ ಖಾಯಂ ರೈಲು ಸೇವೆಯಿಂದ ಹೆಚ್ಚಿನ ಅನುಕೂಲ ದೊರೆಯಲಿದ್ದು, ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದೆ ಎಂದು ನಿರೀಕ್ಷಿಸಲಾಗಿದೆ.
