ಭಟ್ಕಳ/ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆ ಪ್ರಕರಣಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಭಟ್ಕಳ ಹಾಗೂ ಶಿರಸಿಯಲ್ಲಿ ನಡೆಸಿದ ಪ್ರತ್ಯೇಕ ದಾಳಿಗಳಲ್ಲಿ ಇಬ್ಬರು ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದಾರೆ.
ಭಟ್ಕಳದಲ್ಲಿ ಐಷಾರಾಮಿ ಕಾರನ್ನೇ ಬಳಸಿಕೊಂಡು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೆಬಳೆಯ ಫಿರ್ದೋಸ್ ನಗರದ ಅಬ್ರಾರ್ ಮೊಹಿದ್ದೀನ್ ಶೇಖ್ (24) ಬಂಧಿತ ಆರೋಪಿ. ಈತ ಮುಗ್ದೂಮ್ ಕಾಲೋನಿಯ ಮೌಂಟೇನ್ ಗ್ರೌಂಡ್ ಬಳಿ ತನ್ನ ಹೊಂಡಾ ಸಿಟಿ ಕಾರಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ₹5 ಸಾವಿರ ಮೌಲ್ಯದ 84 ಗ್ರಾಂ ಗಾಂಜಾ ಹಾಗೂ ಸುಮಾರು ₹5 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಇದೇ ವೇಳೆ ಶಿರಸಿಯಲ್ಲಿ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದ ಕ್ರಾಸ್ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆನಂದ ಹನುಮಂತ ಬೋವಿ ವಡ್ಡರ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹10,400 ಮೌಲ್ಯದ 197 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಂಜಾ ಮಾರಾಟ ಜಾಲದ ವಿರುದ್ಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
