ನವದೆಹಲಿ: ಇರಾನ್ ವಿರುದ್ಧ ಜಾರಿಯಲ್ಲಿರುವ ಸಮುದ್ರ ನಿರ್ಬಂಧವನ್ನು ಉಲ್ಲಂಘಿಸಿ ಇರಾನ್ ಬಂದರಿನತ್ತ ಸಾಗುತ್ತಿದ್ದ ಎಂ/ಟಿ ಮಾರಿವೆಕ್ಸ್ (M/T Marivex) ತೈಲ ಟ್ಯಾಂಕರ್ನ್ನು ಅಮೆರಿಕದ ಸೇನಾ ಪಡೆಗಳು ಗಲ್ಫ್ ಆಫ್ ಒಮಾನ್ ಸಮುದ್ರ ಪ್ರದೇಶದಲ್ಲಿ ನಿಷ್ಕ್ರಿಯಗೊಳಿಸಿರುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.

ಪಲಾವು (Flag of Palavu) ಧ್ವಜ ಹೊಂದಿದ್ದ ಎಂ/ಟಿ ಮಾರಿವೆಕ್ಸ್ (M/T Marivex) ಎಂಬ ಖಾಲಿ ತೈಲ ಟ್ಯಾಂಕರ್ ಅಂತರರಾಷ್ಟ್ರೀಯ ಜಲಪ್ರದೇಶದ ಮೂಲಕ ಇರಾನ್ ಕಡೆಗೆ ಸಾಗುತ್ತಿತ್ತು. ಹಡಗಿಗೆ ದಿಕ್ಕು ಬದಲಿಸುವಂತೆ ಅಮೆರಿಕ ಪಡೆಗಳು ಸೂಚನೆ ನೀಡಿದ್ದರೂ, ಸಿಬ್ಬಂದಿ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅಮೆರಿಕ ನೌಕಾಪಡೆಯ ಯುಎಸ್ಎಸ್ ಅಬ್ರಹಾಂ ಲಿಂಕನ್ (CVN-72) ವಿಮಾನವಾಹಕ ನೌಕೆಯಿಂದ ಹಾರಿದ್ದ ಎಫ್/ಎ-18 ಸೂಪರ್ ಹಾರ್ನೆಟ್ ಯುದ್ಧವಿಮಾನವು ಹಡಗಿನ ಎಂಜಿನಿಯರಿಂಗ್ ಹಾಗೂ ಸ್ಟೀರಿಂಗ್ ವಿಭಾಗಗಳನ್ನು ಗುರಿಯಾಗಿಸಿಕೊಂಡು ನಿಖರ ದಾಳಿ ನಡೆಸಿದೆ. ಇದರಿಂದ ಟ್ಯಾಂಕರ್ನ ಚಲನೆ ಸ್ಥಗಿತಗೊಂಡಿದ್ದು, ಅದು ಇರಾನ್ಗೆ ತೆರಳುವುದನ್ನು ತಡೆಯಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್ಕಾಂ) ಹೇಳಿಕೊಂಡಿದೆ.
ಏಪ್ರಿಲ್ 13ರಿಂದ ಆರಂಭವಾದ ಈ ನಿರ್ಬಂಧ ಕಾರ್ಯಾಚರಣೆಯಲ್ಲಿ ಇದುವರೆಗೆ ನಿಯಮ ಉಲ್ಲಂಘಿಸಿದ ಏಳು ಹಡಗುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಜೊತೆಗೆ ಸೂಚನೆಗಳನ್ನು ಪಾಲಿಸಿದ 134 ಹಡಗುಗಳನ್ನು ಬೇರೆ ಮಾರ್ಗಕ್ಕೆ ಮರುನಿರ್ದೇಶಿಸಲಾಗಿದೆ. ಮಾನವೀಯ ನೆರವು ಸಾಗಿಸುತ್ತಿದ್ದ 42 ಹಡಗುಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಸೆಂಟ್ಕಾಂ ಮಾಹಿತಿ ನೀಡಿದೆ.
ಒಮಾನ್ ಕರಾವಳಿಯ ಸಮೀಪ ಇತ್ತೀಚೆಗೆ ಬೆಂಕಿ ಅವಘಡಕ್ಕೀಡಾದ Marivex ತೈಲ ಸಾಗಣೆ ಹಡಗು ಕಳೆದ ಡಿಸೆಂಬರ್ನಲ್ಲಿ ಅಮೆರಿಕ ಸರ್ಕಾರದ ನಿರ್ಬಂಧಕ್ಕೆ ಒಳಪಟ್ಟ ಹಡಗುಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು ಎಂದು ಅಂತರರಾಷ್ಟ್ರೀಯ ಹಡಗು ಮಾಹಿತಿ ತಾಣ Equasis ತಿಳಿಸಿದೆ.
ಹಡಗುಗಳ ಸಂಚಾರ ಮಾಹಿತಿ ಪ್ರಕಾರ, ಏಪ್ರಿಲ್ 9ರಂದು ಹೋರ್ಮುಜ್ ಜಲಸಂಧಿಯಲ್ಲಿ ಕದನ ವಿರಾಮ ಘೋಷಣೆಯಾದ ಸಂದರ್ಭದಲ್ಲಿ ಹೊರಬಂದ ಕೆಲವೇ ಹಡಗುಗಳಲ್ಲಿ Marivex ಕೂಡ ಒಂದಾಗಿತ್ತು. ಆ ವೇಳೆ ಈ ಹಡಗು ಇರಾನ್ನ ಬಂದರ್ ಅಬ್ಬಾಸ್ ಬಂದರಿನಿಂದ ತೈಲವನ್ನು ಸಾಗಿಸಿ ಮಂಗಳೂರಿಗೆ ತಲುಪಿಸಿತ್ತು. ಕದನ ವಿರಾಮದ ಬಳಿಕ ಇರಾನ್ ಸಂಪರ್ಕ ಹೊಂದಿದ್ದ ಅನೇಕ ಹಡಗುಗಳು ಪರ್ಷಿಯನ್ ಕೊಲ್ಲಿಯಿಂದ ಹೊರಬಂದಿದ್ದವು ಎನ್ನಲಾಗಿದೆ. ತಜ್ಞರ ಮಾಹಿತಿಯಂತೆ, ಆ ನಂತರದಿಂದ Marivex ಸಂಘರ್ಷ ಪೀಡಿತ ಸಮುದ್ರ ಪ್ರದೇಶದಲ್ಲೇ ಕಾರ್ಯನಿರ್ವಹಿಸುತ್ತಿತ್ತು. ಹಡಗುಗಳ ಸಂಚಾರವನ್ನು ನಿಗಾ ಮಾಡುವ MarineTraffic ವೆಬ್ಸೈಟ್ ಮಾಹಿತಿ ಪ್ರಕಾರ, Marivex ಹಡಗಿನ ಕೊನೆಯ ಬಂದರು ಕರ್ನಾಟಕದ ಕಾರವಾರ ಆಗಿದ್ದು, ಅಲ್ಲಿಂದ ಒಮಾನ್ನ ದುಕ್ಮ್ (Duqm) ಬಂದರಿನತ್ತ ಪ್ರಯಾಣಿಸುತ್ತಿತ್ತು.
