ಮಸ್ಕಟ್/ನವದೆಹಲಿ: ಒಮಾನ್ ಕರಾವಳಿ ಸಮೀಪ ಸಾಗರದಲ್ಲಿ ಸಂಚರಿಸುತ್ತಿದ್ದ ಭಾರತೀಯ ಸಿಬ್ಬಂದಿಯಿದ್ದ ತೈಲ ಟ್ಯಾಂಕರ್‌ಗೆ ಅನುಮಾನಾಸ್ಪದ ಪ್ರೊಜೆಕ್ಟೈಲ್ (ಡ್ರೋನ್ ಅಥವಾ ಕ್ಷಿಪಣಿ) ಅಪ್ಪಳಿಸಿದ ಪರಿಣಾಮ ಬೆಂಕಿ ಕಾಣಿಸಿಕೊಂಡ ಘಟನೆ ಸೋಮವಾರ ಸಂಭವಿಸಿದೆ.

ಹಡಗಿನಲ್ಲಿ ಇದ್ದ ಎಲ್ಲಾ 24 ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಪಲಾವ್ ಧ್ವಜ (flag of Palau) ಹೊಂದಿದ್ದ ಎಂಟಿ ಮಾರಿವೆಕ್ಸ್ (MT Marivex) ಎಂಬ ತೈಲ ಟ್ಯಾಂಕರ್, ಸಂಘರ್ಷ ಪೀಡಿತ ಹೋರ್ಮುಜ್ ಜಲಸಂಧಿ (Strait of Hormuz) ಸಮೀಪ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಮಧ್ಯಾಹ್ನ ಸುಮಾರು 1.30ಕ್ಕೆ ಹಡಗಿನ ಎಂಜಿನ್ ಭಾಗಕ್ಕೆ ಪ್ರೊಜೆಕ್ಟೈಲ್ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿದೆ ಎಂದು ಭಾರತದ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯ ತಿಳಿಸಿದೆ.
ಬೆಂಕಿಯ ತೀವ್ರತೆಯಿಂದ ಹಡಗಿನಲ್ಲಿದ್ದ ಜೀವ ರಕ್ಷಕ ದೋಣಿಗಳು (ಲೈಫ್‌ಬೋಟ್‌ಗಳು) ಬಳಕೆಗೆ ಅಸಾಧ್ಯವಾಗಿದ್ದವು ಎಂದು ಹಡಗಿನಿಂದ ಕಳುಹಿಸಲಾದ ಎಸ್‌ಒಎಸ್ ಸಂದೇಶದಲ್ಲಿ ತಿಳಿಸಲಾಗಿದೆ. ಹಡಗು ನೋಂದಣಿ ಮಾಹಿತಿಯ ಪ್ರಕಾರ, ಗುಜರಾತ್ ಮೂಲದ ಯಾಂತ್ರಿಕ ತೈಲ ಟ್ಯಾಂಕರ್ ಆಗಿರುವ ಮಾರಿವೆಕ್ಸ್, ಕರ್ನಾಟಕದ ಕಾರವಾರ ಬಂದರಿನಿಂದ ಒಮಾನದ Duqm ನಗರಕ್ಕೆ ತೆರಳುತ್ತಿತ್ತು. ಹಡಗು ಯಾವುದೇ ಸರಕು ಸಾಗಿಸುತ್ತಿರಲಿಲ್ಲ. ಶಿಪ್ ನಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ನೀರನ್ನು ಮಾತ್ರ ಹೊತ್ತೊಯ್ಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಹಡಗು ಸಾಗಣೆ ವಿಭಾಗದ ನಿರ್ದೇಶಕ ಓಪೇಶ್ ಕುಮಾರ್ ಶರ್ಮಾ, ಹಡಗು ಹೋರ್ಮುಜ್ ಜಲಸಂಧಿಯಿಂದ ದಕ್ಷಿಣಕ್ಕೆ ಸುರಕ್ಷಿತ ಅಂತರದಲ್ಲಿತ್ತು ಎಂದು ಹೇಳಿದ್ದಾರೆ. ಹಡಗಿಗೆ ಪ್ರೊಜೆಕ್ಟೈಲ್ ಅಪ್ಪಳಿಸಿತೇ ಎಂಬುದರ ಕುರಿತು ಇನ್ನೂ ನಿಖರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದೂ ತಿಳಿಸಿದ್ದಾರೆ.
ಸಮುದ್ರಯಾನಿಕರ ಸುರಕ್ಷತೆಗಾಗಿ ವಿದೇಶಾಂಗ ಸಚಿವಾಲಯ, ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು, ರಕ್ಷಣಾ ಸಚಿವಾಲಯ ಹಾಗೂ ಭಾರತೀಯ ನೌಕಾಪಡೆಯೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ, Forward Seamen’s Union of India ಸಂಸ್ಥೆಯು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿ, ಒಮಾನ್ ಕರಾವಳಿ ಸಮೀಪ ಸಿಲುಕಿದ್ದ ಭಾರತೀಯ ನಾವಿಕರು ತುರ್ತು ನೆರವು ಕೋರಿದ್ದರು ಎಂದು ತಿಳಿಸಿದೆ.
