Ankola | ತಾಲೂಕಿನ ಹಿಲ್ಲೂರ ಸಮೀಪದ ಹೇಬ್ರಿಗದ್ದೆ ಗ್ರಾಮದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ವ್ಯಕ್ತಿಯೊರ್ವನ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಹಾಗೂ ಅವಾಚ್ಯ ಶಬ್ದದಿಂದ ನಿಂದಿಸಿದ ಆರೋಪದ ಮೇಲೆ ಹಿಲ್ಲೂರಬೈಲ್ ನಿವಾಸಿ ನಾಗರಾಜ ಮೊನು ಗೌಡ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ: ಕಳೆದ ವರ್ಷದ ಕೃಷ್ಣಮೂರ್ತಿ ವಿಸರ್ಜನೆ ವೇಳೆ ನಡೆದ ಗಲಾಟೆಯನ್ನು ಹಿಲ್ಲೂರಿನ ಪ್ರಮೋದ
ಮಹಾಬಲೇಶ್ವರ ಹರಿಕಂತ್ರ ಆರೋಪಿಗೆ ಸಮಾಧಾನಪಡಿಸಿ ಇತ್ಯರ್ಥ ಮಾಡಿದ್ದ. ಈ ವಿಷಯಕ್ಕೆ ಆರೋಪಿ ನಾಗರಾಜಗೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.

ಜೂನ್ 3ರಂದು ರಾತ್ರಿ ಸುಮಾರು 9.30 ಗಂಟೆಗೆ ಪ್ರಮೋದ ತನ್ನ ಸ್ನೇಹಿತರೊಂದಿಗೆ ಮೀನು ತರಲು ಕಂಡಕುಳಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಹೇಬ್ರಿಗದ್ದೆಯಲ್ಲಿರುವ ಅಂಗಡಿಯೊಂದರ ಎದುರು ನಿಂತಿದ್ದ ನಾಗರಾಜ ಕರೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ನಾಗರಾಜ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಳೆದ ವರ್ಷ ಕೃಷ್ಣಮೂರ್ತಿ ವಿಸರ್ಜನೆ ಸಮಯದಲ್ಲಿ ಗಲಾಟೆ ತಪ್ಪಿಸಲು ಬಂದಿದ್ದಿಯಾ. ನೀನು ದೊಡ್ಡ ಹಿರೋನಾ.. ಬೊ*ಮಗನೇ ಎಂದು ಅವಾಚ್ಯವಾಗಿ ಬೈದು, ಕೆನ್ನೆಗೆ ಹೊಡೆದು, ದೂಡಿ ನೆಲಕ್ಕೆ ಬಿಳಿಸಿದ್ದಾನೆ. ನಂತರ ಅಂಗಡಿಯ ಹೊರಗಡೆ ಇದ್ದ ಖಾಲಿ ಸೋಡಾ ಬಾಟಲಿಯನ್ನು ತೆಗೆದುಕೊಂಡು ವಿದ್ಯುತ್ ಕಂಬಕ್ಕೆ ಹೊಡೆದು ಚೂರು ಮಾಡಿ, ಚುಚ್ಚಲು ಬಂದಿದ್ದಾನೆ. ಆಗ ಪ್ರಮೋದನ ಜೊತೆಗೆ ಇದ್ದವರು ತಪ್ಪಿಸಿದ್ದಾರೆ. ಆದರೂ ಬಿಡದ ಆರೋಪಿ ಅಂಗಡಿಯ ಹಿಂದುಗಡೆ ಹೋಗಿ ಕಟ್ಟಿಗೆ ರೀಪ್‌ನ್ನು ತೆಗೆದುಕೊಂಡು ಬಂದು ಫಿರ್ಯಾದಿಯ ತಲೆಗೆ ಹೊಡೆದು, ಬೋ* ಮಗನೇ.. ನಿನಗೆ ಇಷ್ಟಕ್ಕೆ ಬಿಡುವುದಿಲ್ಲಾ. ಮುಂದೆ ಸಿಕ್ಕು ನಿನಗೊಂದು ಗತಿ ಕಾಣಿಸ್ತೇನೆ ಎಂದು ಬೆದರಿಕೆ ಹಾಕಿದ್ದಾನೆ‌ ಎನ್ನಲಾಗಿದೆ.

ಹೊಡೆತ ತಿಂದು ಗಾಯಗೊಂಡ ಪ್ರಮೋದ ಹರಿಕಂತ್ರ ಚಿಕಿತ್ಸೆಗಾಗಿ ಕಾರವಾರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅಂಕೋಲಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ.