Karwar|  ದೇವಸ್ಥಾನಗಳಿಗೆ ಕಳ್ಳರು ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಕಳುವು ಮಾಡಿಕೊಂಡು ಹೋದ ಘಟನೆ ತಾಲೂಕಿನ ಮೂರು ದೇವಸ್ಥಾನಗಳಲ್ಲಿ ನಡೆದಿದೆ.

ಮೊದಲನೇಯ ಪ್ರಕರಣದಲ್ಲಿ, KSRTC ಡಿಪೋ ಬಳಿಯ ಹಬ್ಬುವಾಡ ರಸ್ತೆಯಲ್ಲಿರುವ ದಾಸ ಮಾರುತಿ ದೇವಸ್ಥಾನಕ್ಕೆ ನುಗ್ಗಿ ಕಳ್ಳರು ಅಲ್ಲಿಟ್ಟಿದ್ದ ಅಂದಾಜು ಮೂವತ್ತು ಸಾವಿರ ಮೌಲ್ಯದ ಸುಮಾರು ಐವತ್ತು ಕೆ.ಜಿ ತೂಕದ ಹಿತ್ತಾಳೆ, ತಾಮ್ರದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಕಳ್ಳತನ ಮೇ.20 ರಂದೇ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಶ್ಯಾಮಸುಂದರ ಅನಂತ ಬಸ್ರೂರು ನಗರಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ, ಹಾಡುಹಗಲೇ ಚೆಂಡಿಯಾದ ಜಯಮಾರುತಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು, ಅಲ್ಲಿ ತೂಗು ಹಾಕಿದ್ದ ಹಿತ್ತಾಳೆಯ ಎರಡು ಗಂಟೆಗಳನ್ನೆ ಹೊತ್ತೊಯ್ದಿದ್ದಾರೆ. ಈ ಎರಡು ಗಂಟೆಗಳ ಮೌಲ್ಯ ಸುಮಾರು 21 ಸಾವಿರ ಎಂದು ಅಂದಾಜಿಸಲಾಗಿದೆ. ಮೇ.31ರಂದೇ ಪ್ರಕರಣ ನಡೆದಿದೆ ಎನ್ನಲಾಗಿದೆ. ಇನ್ನು  ಕಳ್ಳತನದ ಬಗ್ಗೆ ಚೆಂಡಿಯಾದ ನರಸಿಂಹ ಸುಬ್ರಾಯ ಆಚಾರಿ ಕಾರವಾರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೂರನೇಯ ಪ್ರಕರಣದಲ್ಲಿ ಮಖೇರಿಯ ಸಾಸನವಾಡಾದಲ್ಲಿರುವ ರಾಮಸತಿ ದೇವಿ ದೇವಸ್ಥಾನದಲ್ಲಿನ ಹಿತ್ತಾಳೆಯ ಸಮಯ ಹಾಗೂ ಗಂಟೆಗಳನ್ನು ಕದ್ದೊಯ್ದಿದ್ದಾರೆ. ಒಟ್ಟು 25 ಸಾವಿರ ಮೌಲ್ಯದ ವಸ್ತುಗಳ ಕಳುವು ಮಾಡಿದ್ದಾರೆ. ಜೂನ್‌.4 ರ ಬೆಳಗ್ಗಿನ ಅವಧಿಯಲ್ಲೇ ದೇವಸ್ಥಾನದಲ್ಲಿ ಕಳುವು ನಡೆದಿದೆ ಎನ್ನಲಾಗಿದ್ದು, ವಿಘ್ನೇಶ್ವರ ರತ್ನಾಕರ ನಾಗೇಕರ ಎಂಬುವವರು ಕಾರವಾರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೂರು ಪ್ರಕರಣಗಳಲ್ಲಿ ಒಂದೇ ರೀತಿಯಲ್ಲಿ ದೇವಸ್ಥಾನದ ತಾಮ್ರ, ಹಿತ್ತಾಳೆ ವಸ್ತುಗಳನ್ನು ಮಾತ್ರ ಕಳ್ಳರು ಕದ್ದೊಯ್ದಿದ್ದಾರೆ.  ಪೋಲಿಸರು ತನಿಖೆ ಚುರುಕುಗೊಳಿಸಿದ್ದಾರೆ.